ಮಡಿಕೇರಿ NEWS DESK ಸೆ.25 : ಜೆಡಿಎಸ್ ಬೆಂಬಲದಿಂದ ಕುಶಾಲನಗರ ಪುರಸಭೆಯ ಅಧಿಕಾರ ಕಾಂಗ್ರೆಸ್ ಪಾಲಾಗಿದೆ. ನೂತನ ಅಧ್ಯಕ್ಷರಾಗಿ ಜಯಲಕ್ಷ್ಮಿ ಚಂದ್ರು ಹಾಗೂ ಉಪಾಧ್ಯಕ್ಷರಾಗಿ ಪುಟ್ಟ ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿತ ಸದಸ್ಯರುಗಳು ಚುನಾವಣೆ ಬಹಿಷ್ಕರಿಸಿದ್ದರು. ಇದು ಅವಿರೋಧ ಆಯ್ಕೆಗೆ ದಾರಿ ಸುಗಮಗೊಳಿಸಿತು. ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಪರ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಪರ ಪುರಸಭೆ ಸದಸ್ಯರಾದ ಕಲೀಮುಲ್ಲಾ ಚುನಾವಣಾಧಿಕಾರಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ನಾಮಪತ್ರ ಸಲ್ಲಿಸಿದರು. ಪುರಸಭೆ ಕಛೇರಿ ಆವರಣಕ್ಕೆ ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಸದಸ್ಯರು ಚುನಾವಣೆ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ದಿಕ್ಕಾರ ಕೂಗಿದರು. ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿ ತಹಶೀಲ್ದಾರ್ ಗೆ ಪತ್ರ ಸಲ್ಲಿಸಿ ತೆರಳಿದರು. ನಿಗಧಿತ ಅವಧಿಯ ನಂತರ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ಕುರಿತು ಚುನಾವಣಾಧಿಕಾರಿ ಘೋಷಿಸಿದರು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಜೆಡಿಎಸ್ ಸದಸ್ಯರುಗಳು ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 6 ಸದಸ್ಯರ ಸಮಬಲ ಹೊಂದಿತ್ತು. ನಾಲ್ಕು ಸದಸ್ಯ ಸ್ಥಾನ ಹೊಂದಿದ್ದ ಜೆಡಿಎಸ್ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿತು. ವಿಜಯೋತ್ಸವದಲ್ಲಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಕೋರಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸದಸ್ಯರ ಸಹಕಾರ, ಪಕ್ಷದ ಸದಸ್ಯರು ಹಾಗೂ ಮುಖಂಡರ ಪ್ರಯತ್ನದಿಂದ ನಮ್ಮ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪುರಸಭೆ ಸದಸ್ಯರಾದ ಎಂ.ಕೆ.ದಿನೇಶ್, ಜಯಲಕ್ಷ್ಮಮ್ಮ ನಂಜುಂಡಸ್ವಾಮಿ, ಜೆಡಿಎಸ್ ಸದಸ್ಯರಾದ ಜಗದೀಶ್, ಸುರಯ್ಯಭಾನು, ಆನಂದ ಕುಮಾರ್, ಸುರೇಶ್, ನಾಮನಿರ್ದೇಶಿತ ಸದಸ್ಯರಾದ ಶಿವಶಂಕರ್, ಜಗದೀಶ್, ನವೀನ್, ಹರೀಶ್, ಪ್ರಕಾಶ್, ಪದ್ಮಾ, ಖಾದರ್, ಕುಡಾ ಸದಸ್ಯ ಕಿರಣ್ ಸೇರಿದಂತೆ ಪ್ರಮುಖರು ಹಾಗೂ ಕಾರ್ಯಕರ್ತರು ಇದ್ದರು.