ಮಡಿಕೇರಿ NEWS DESK ಸೆ.28 : ಕೂರ್ಗ್ ಕಾಫಿವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ಮಿಸಿ, ನಿರ್ದೇಶಿಸಿರುವ ಕೊಡವ ಚಲನಚಿತ್ರ “ಕಾಂಗತ ಮೂಡ್”(“(The Shadow) ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಪ್ರೊಮೋ ಮತ್ತು ಪೋಸ್ಟರ್ ನ್ನು ಇಂದು ಬಿಡುಗಡೆ ಮಾಡಲಾಯಿತು.
ನಗರದ ಪತ್ರಿಕಾ ಭವನದಲ್ಲಿ ಪ್ರೊಮೋ ಮತ್ತು ಪೋಸ್ಟರ್ ನ್ನು ಬಿಡುಗಡೆ ಮಾಡಿ ಮಾತನಾಡಿದ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರು ಕೊಡವ ಸಿನಿಮಾಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದರು. ಕೊಡಗಿನಲ್ಲಿ ಹಿಂದೆ ಕೃಷಿ ಚಟುವಟಿಕೆ ಸುಖೀಮಯವಾಗಿತ್ತು, ತೋಟದ ಮಾಲೀಕ ಬೆಂಗಳೂರು ಅಥವಾ ಬೇರೆಲ್ಲೋ ಇದ್ದುಕೊಂಡು ರೈಟರ್ ಮೂಲಕ ತೋಟವನ್ನು ನಿಭಾಯಿಸುವ ಪ್ರೀತಿ ಮತ್ತು ನಂಬಿಕೆಯ ವ್ಯವಹಾರವಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿದ್ದು, ಜೀವನ ಸಂಪೂರ್ಣ ಯಾಂತ್ರೀಕೃತವಾಗಿದೆ. ಪ್ರೀತಿ ಮತ್ತು ನಂಬಿಕೆ ಕಳೆದು ಹೋಗಿದೆ. ವ್ಯಕ್ತಿ ಹಾಗೂ ಸಮಾಜಕ್ಕೆ ಇರುವ ಮತ್ತೊಂದು ಮುಖವನ್ನು ತೋರಿಸುವ ಪ್ರಯತ್ನವನ್ನು “ಕಾಂಗತ ಮೂಡ್” ಚಿತ್ರತಂಡ ಮಾಡಿದೆ.
ಮದ್ಯ ವ್ಯಸನ ಮತ್ತು ಮತಾಂತರದಂತಹ ಸಾಮಾಜಿಕ ಪಿಡುಗು ಇಡೀ ವ್ಯವಸ್ಥೆಯ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎನ್ನುವುದನ್ನು ಚಿತ್ರದಲ್ಲಿ ಪ್ರತಿಬಿಂಬಿಸಲಾಗಿದೆ. ತಮಗೂ ಈ ಚಿತ್ರದಲ್ಲಿ ನಟಿಸಲು ಅವಕಾಶ ದೊರೆತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗುಣಮಟ್ಟದ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶಿಸಿ ಪ್ರಶಸ್ತಿ ಗೆದ್ದಿರುವ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹಾಗೂ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರುಗಳಲ್ಲಿ ಅದ್ಭುತ ಪ್ರತಿಭೆ ಇದೆ. ಹಿತ್ತಲ ಗಿಡ ಮದ್ದಲ್ಲ ಎನ್ನುವ ರೀತಿಯಲ್ಲಿ ಕೊಡಗಿನ ಈ ಪ್ರತಿಭೆಗಳು ಪ್ರೋತ್ಸಾಹದ ಕೊರತೆಯನ್ನು ಎದುರಿಸುತ್ತಿದ್ದಾರೆ. ಎಲ್ಲರೂ ಕೊಡವ ಸಿನಿಮಾ ನೋಡಿ ಬೆಂಬಲಿಸುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ಬಿ.ಜಿ.ಅನಂತಶಯನ ಕರೆ ನೀಡಿದರು. “ಕಾಂಗತ ಮೂಡ್” ಚಿತ್ರದ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಮಾತನಾಡಿ, ನಮ್ಮ ಸಂಸ್ಥೆಯ ಮೂಲಕ ಇಲ್ಲಿಯವರೆಗೆ ಆರು ಕೊಡವ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಲಾಗಿದೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರಗಳು ಪ್ರಶಸ್ತಿಗಳನ್ನು ಗೆದ್ದಿವೆ. ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಸಮುದಾಯದ ಕೊಡವ ಪ್ರತಿಭೆಗಳು ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನುವುದನ್ನು ಸಾಕ್ಷೀಕರಿಸಲು ಪ್ರತಿವರ್ಷ ಒಂದು ಕೊಡವ ಚಿತ್ರವನ್ನು ನಿರ್ಮಿಸಲಾಗುತ್ತಿದೆ ಎಂದರು. ಕೊಡವ ಚಿತ್ರಗಳ ಮೂಲಕ ಕೊಡವ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಲಾಗುತ್ತಿದೆ. ಆದರೆ ಕೊಡವ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಎದುರಾಗಿರುವುದು ಅತ್ಯಂತ ಬೇಸರದ ವಿಚಾರ ಎಂದು ತಿಳಿಸಿದ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಕಲಾತ್ಮಕ ಚಿತ್ರಗಳ ಮೂಲಕವೇ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. “ಕಾಂಗತ ಮೂಡ್” ಚಿತ್ರದಲ್ಲಿ ಮದ್ಯ ವ್ಯಸನ ಮತ್ತು ಮತಾಂತರದ ಪಿಡುಗಿನಲ್ಲಿ ಸಿಲುಕಿ ದುರಂತ ಅಂತ್ಯ ಕಾಣುವ ವ್ಯಕ್ತಿಯ ಚಿತ್ರಣವನ್ನು ತೋರಿಸಲಾಗಿದೆ. ತೋಟದ ಮಾಲೀಕ ಆತ್ಮಾವಲೋಕನ ಮಾಡಿಕೊಳ್ಳುವ ಅಂಶವೂ ಇದೆ ಎಂದು ವಿವರಿಸಿದರು. ನಮ್ಮ ನಿರ್ಮಾಣದ ಕಂದೀಲು ಮತ್ತು ಬೇರ್ ಚಿತ್ರಗಳು ಈ ಬಾರಿಯ ಮೈಸೂರು ದಸರಾ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ಎನಿಸಿದೆ ಎಂದು ತಿಳಿಸಿದರು.
ಚಿತ್ರದ ಸಹ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಮಾತನಾಡಿ ಕೊಡಗಿನಲ್ಲಿ ಸಿನಿಮಾಸಕ್ತಿ ಕಡಿಮೆ ಇದೆ, ಕೊಡವ ಚಿತ್ರಗಳಿಗೆ ನಿರೀಕ್ಷಿತ ಬೆಂಬಲ ದೊರೆಯುತ್ತಿಲ್ಲ. ಹಾಕಿದ ಹಣ ಮರಳಿ ಬರುವುದೇ ಕಷ್ಟವಾಗಿದೆ. ಆದರೂ ಕೊಡವ ಭಾಷೆಯ ಮೇಲಿನ ಅಭಿಮಾನದಿಂದ ವರ್ಷಕ್ಕೆ ಒಂದು ಸಿನಿಮಾವನ್ನು ನಿರ್ಮಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
“ಕಾಂಗತ ಮೂಡ್” ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ಎಲ್ಲರ ಅಭಿನಯವೂ ಚೆನ್ನಾಗಿದೆ. ಪ್ರತಿಯೊಬ್ಬರು ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು. ಚಿತ್ರದ ಸಹ ನಿರ್ದೇಶಕಿ ಈರಮಂಡ ಹರಿಣಿ ವಿಜಯ್ ಮಾತನಾಡಿ ಕೊಡಗಿನ ಜನ ಬೇರೆ ಸಿನಿಮಾಗಳನ್ನು ನೋಡುತ್ತಾರೆ, ಆದರೆ ಕೊಡವ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆ ಇದೆ. ಪ್ರೋತ್ಸಾಹದ ಕೊರತೆಯಿಂದ ಚಿತ್ರ ನಿರ್ಮಾಣ ಭಯ ಮತ್ತು ಬೇಸರವನ್ನು ಮೂಡಿಸುತ್ತದೆ ಎಂದು ತಿಳಿಸಿದರು.
“ಕಾಂಗತ ಮೂಡ್” ಚಿತ್ರ ನೈಜತೆಯೊಂದಿಗೆ ವಿಭಿನ್ನವಾಗಿ ಮೂಡಿ ಬಂದಿದೆ ಎಂದರು. ಚಿತ್ರದ ನಾಯಕ ನಟ ಚಡಿಯಂಡ ಸಂತೋಷ್ ಮೇದಪ್ಪ ಮಾತನಾಡಿ ಇದು ನಾನು ನಟಿಸಿದ ನಾಲ್ಕನೇ ಚಿತ್ರವಾಗಿದ್ದು, ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ. ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರೊಂದಿಗೆ ಕೆಲಸ ಮಾಡಲು ಖುಷಿಯಾಗಿದೆ ಎಂದು ಹೇಳಿದರು. ಚಿತ್ರದ ನಿರ್ಮಾಣ ನಿರ್ವಹಣೆ ಮಾಡಿರುವ ನಟ ಬೊಳ್ಳಜಿರ ಬಿ.ಅಯ್ಯಪ್ಪ ಅವರು “ಕಾಂಗತ ಮೂಡ್” ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
::: ಚಿತ್ರೀಕರಣ ಪೂರ್ಣ :::
ಮೂರ್ನಾಡಿನ ಬಿದ್ದಂಡ ಪೊನ್ನಪ್ಪ ಅವರ ನಿವಾಸದಲ್ಲಿ ಆರಂಭಗೊAಡ ಚಿತ್ರೀಕರಣವನ್ನು 15 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ. ಕೊಡಗಿನ ಬಡುವಂಡ ಅರುಣ್, ಕನ್ನು ಅಪ್ಪಚ್ಚು ಅವರ ಮಾಲೀಕತ್ವದ ಡ್ರೀಮ್ ಪಾತ್ ಎಸ್ಟೇಟ್ ಸ್ಟೇ, ವಾಟರ್ ಸೈಡ್ ಕಾಫಿ ಕೆಫೆ, ಹೊದ್ದೂರು ಚೌರೀರ ಐನ್ ಮನೆ, ಗದ್ದೆಗಳು, ಮೂರ್ನಾಡು ಪಟ್ಟಣ, ಕೋಡಂಬೂರು, ಬಲಮುರಿ, ಬಿಟ್ಟಂಗಾಲ, ಕಂಡAಗಾಲ ಮೂವತ್ತುಮನಿ, ಪಿರಿಯಾಪಟ್ಟಣ ಸೇರಿದಂತೆ ವಿವಿಧೆಡೆ ಚಿತ್ರೀಕರಿಸಿ ಇದೀಗ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ. ಚಿತ್ರೀಕರಣಕ್ಕೆ ಮೂರ್ನಾಡು ಕಾಂತೂರು ಗ್ರಾಮದ ಕಾಫಿ ಬೆಳೆಗಾರರಾದ ಬಿದ್ದಂಡ ಲೀಲಾ ಪೊನ್ನಪ್ಪ, ಕುಟುಂಬಸ್ಥರು ಹಾಗೂ ಕಂಡಂಗಾಲದ ಮೂಕಚಂಡ ಪ್ರಸನ್ನ ಸುಬ್ಬಯ್ಯ ಅವರು ಸಹಕರಿಸಿದ್ದಾರೆ ಎಂದು ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ತಿಳಿಸಿದರು. :: ಚಿತ್ರತಂಡ :: “ಕಾಂಗತ ಮೂಡ್” ಚಿತ್ರದ ನಿರ್ದೇಶನದೊಂದಿಗೆ ಪ್ರಮುಖ ಪಾತ್ರದಲ್ಲಿಯೂ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಕಾಣಿಸಿಕೊಂಡಿದ್ದಾರೆ. ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರು ಗೌರವ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಡಿಯಂಡ ಸಂತೋಷ್ ಮೇದಪ್ಪ, ಅಪ್ಪಡೇರಂಡ ತೇಜು ಪೊನ್ನಪ್ಪ, ಗುಮ್ಮಟ್ಟಿರ ಕಿಶು ಉತ್ತಪ್ಪ, ಬೊಳ್ಳಜಿರ ಬಿ.ಅಯ್ಯಪ್ಪ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಮ್ಮಾಟಂಡ ದೇವಯ್ಯ, ವಿಂದ್ಯ ದೇವಯ್ಯ, ಅಜ್ಜಮಕ್ಕಡ ವಿನು ಕುಶಾಲಪ್ಪ, ತಂಬುಕುತ್ತೀರಾ ಚರಣ್, ಸಿದ್ದಂಡ ಶಂಭು, ದೇವಂಡಿರ ಲೋಕೇಶ್, ಮಂಡೆಯಂಡ ಸೂರಜ್, ಮಂಡೆಯಂಡ ಪ್ರೀನಾ, ಮೂರ್ನಾಡುವಿನ ಸ್ಟೆಪ್ ಅಪ್ ಡ್ಯಾನ್ಸ್ ಅಕಾಡೆಮಿಯ ಬಾಲ ಕಲಾವಿದರುಗಳು, ಕಂಡಂಗಾಲ ಮೂವತ್ತುಮನಿ ಸುಬ್ರಮಣಿ ತಂಡದವರು ನಟಿಸಿದ್ದಾರೆ. ಸಹ-ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿರುವ ಈರಮಂಡ ಹರಿಣಿ ವಿಜಯ್ ಅವರು ಚಿತ್ರಕ್ಕೆ ಸಂಭಾಷಣೆ ನೀಡಿದ್ದಾರೆ. ಚಿತ್ರಕಥೆ ಗಾರ್ಗಿ ಕಾರೆಹಕ್ಲು, ಛಾಯಾಗ್ರಹಣ ಪ್ರದೀಪ್ ಆರ್ಯನ್ ಹಾಗೂ ರಿಕ್ತಿ ನಿರಂಜನ್, ಸೌಂಡ್ ಇಂಜಿನಿಯರ್ ಮೇಘರಾಜ್, ಸಂಕಲನ ಮುತ್ತುರಾಜ್, ಡಿ.ಐ.ನಿಖಿಲ್ ಕಾರ್ಯಪ್ಪ, ಸಬ್ ಟೈಟಲ್ ಚೋಕಂಡ ದಿನು ನಂಜಪ್ಪ ಹಾಗೂ ಯದುನಂದನ್ ಅವರು ಸಂಗೀತ ನೀಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಈರಮಂಡ ವಿಜಯ್ ಉತ್ತಯ್ಯ, ನಿರ್ಮಾಣ ನಿರ್ವಹಣೆ ಬೊಳ್ಳಜಿರ ಬಿ.ಅಯ್ಯಪ್ಪ, ನಿರ್ಮಾಣ ನಿಯಂತ್ರಕ ನೀಲ್ ನಾಗರಾಜ್, ಸಹಾಯಕ ನಿರ್ದೇಶಕರಾಗಿ ಕೊಚ್ಚೆರ ನರೇನ್ ಬಿದ್ದಪ್ಪ ಕಾರ್ಯನಿರ್ವಹಿಸಿದ್ದಾರೆ.