ಸೋಮವಾರಪೇಟೆ NEWS DESK ಸೆ.28 : ಅಂತರರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ಅ.1ರಂದು ಕಾಫಿ ಕುಡಿಯುವುದನ್ನು ಉತ್ತೇಜಿಸಲು, ಕೊಡಗು ಕಾಫಿಯ ವಿಶಿಷ್ಟ ರುಚಿಯನ್ನು ಸವಿಯಲು ಸೋಮವಾರಪೇಟೆ ಪಟ್ಟಣದ ಚಿಕ್ಕಬಸಪ್ಪ ಕ್ಲಬ್ ಆವರಣದಲ್ಲಿ ಉಚಿತವಾಗಿ ಕಾಫಿ ವಿತರಿಸಲಾಗುವುದು ಎಂದು ಕೂರ್ಗ್ ವುಮೆನ್ಸ್ ಕಾಫಿ ಅವರ್ನೆಸ್ ಬಾಡಿ (CWCAB) ಕಾರ್ಯದರ್ಶಿ ಅನಿತಾ ನಂದ ಹೇಳಿದರು. ಅದೇ ದಿನ ಪೊನ್ನಂಪೇಟೆಯ ಸಿಐಟಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಕುಟ್ಟ ಗ್ರಾಮದ ಜಂಕ್ಷನ್ನಲ್ಲಿ ಕಾಫಿಯನ್ನು ವಿತರಿಸುತ್ತೇವೆ. ಮೂರು ಕಡೆಗಳಲ್ಲೂ ಬೆಳಿಗ್ಗೆ 10ರಿಂದ 12 ಗಂಟೆಯ ವರೆಗೆ ವಿತರಿಸಲಾಗುವುದು ಎಂದು ಸೋಮವಾರಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಯುವಕರು ಕಾಫಿ ಸೇವಿಸುವಂತಾಗಬೇಕು. ಪ್ರವಾಸಿಗರು, ವಿದ್ಯಾರ್ಥಿಗಳು ಕಾಫಿ ಕುಡಿಯಲು ಪ್ರಾರಂಭಿಸಿದರೆ, ಕಾಫಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂದು ಹೇಳಿದರು. 2002ನೇ ಇಸವಿಯಲ್ಲಿ ಸಿಡಬ್ಲೂö್ಯಸಿಎಬಿ ಯನ್ನು ಪ್ರಾರಂಭಿಸಲಾಗಿದ್ದು, ಈಗ 400ಮಂದಿ ಸದಸ್ಯರಿದ್ದಾರೆ. ಕಾಫಿ ಉದ್ಯಮದಲ್ಲಿ ಮಹಿಳೆಯರು ತೊಡಗಿಸಿಕೊಳ್ಳಲು ಸಂಸ್ಥೆ ಪ್ರೋತ್ಸಾಹ ಮಾಡುತ್ತದೆ. ಉತ್ಪಾದನೆ ಮತ್ತು ಮಾರ್ಕೆಟಿಂಗ್ನಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ತರಬೇತಿ, ಸಂಪನ್ಮೂಲಗಳು ಹಾಗೂ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ. ಪರಿಸರ ಸ್ನೇಹಿ, ಸಾವಯವ ಮಾದರಿಯಲ್ಲಿ ಕಾಫಿ ಉತ್ಪಾದನಾ ವಿಧಾನವನ್ನು ಉತ್ತೇಜಿಸಲಾಗುತ್ತಿದೆ. ಕಾಫಿ ಸೇವನೆಯಿಂದ ಅರೋಗ್ಯ ಪ್ರಯೋಜನಗಳು ಬಹಳಷ್ಟಿವೆ. ಹೃದಯ ಮತ್ತು ಪಿತ್ತಜನಕಾಂಗದ ಕಾಯಿಲೆಯ ಅಪಾಯವನ್ನು ತಡೆಯಬಹುದು. ದೀರ್ಘ ಕಾಲದ ಚರ್ಮದ ಅರೈಕೆಗಾಗಿ ಸೌಂದರ್ಯವರ್ಧಕ ಉದ್ಯಮದಲ್ಲಿ ಕಾಫಿಯನ್ನು ಬಳಸುವುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಕಾಫಿ, ಕಾಳುಮೆಣಸು ಕೃಷಿ ಮಾಡುವ ವಿಧಾನ, ರೋಗ ನಿಯಂತ್ರಣ, ಅರೈಕೆ ಇವುಗಳ ಬಗ್ಗೆ ತಜ್ಞರಿಂದ ಮಾಹಿತಿ ಕೊಡಿಸುವ ಕಾರ್ಯಾಗಾರಗಳನ್ನು ನಡೆಸುತ್ತ ಬರಲಾಗಿದೆ. ಜೇನು ಕೃಷಿ ಮಾಡುವುದರಿಂದ ಕಾಫಿ ಬ್ಲಾಸಂ ಸಂದರ್ಭದಲ್ಲಿ ಜೆನ್ನೋಣಗಳಿಂದ ಪರಾಗಸ್ಪರ್ಶ ಪ್ರಕ್ರಿಯೆಗಳಯ ನಡೆಯಬೇಕು. ಈ ಕಾರಣದಿಂದ ಪ್ರತಿಯೊಬ್ಬ ಬೆಳೆಗಾರರು ಜೇನು ಕೃಷಿ ಮಾಡುವಂತೆ ಉತ್ತೇಜನ ನೀಡಲಾಗುತ್ತಿದೆ ಎಂದು ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಣಿ ನರೇಂದ್ರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕಿ ಅನುರಾಧ ಇದ್ದರು.