ಗೋಣಿಕೊಪ್ಪ NEWS DESK ಸೆ.30 : ವಚನ ಸಾಹಿತ್ಯ ಮರೆತು ಹೋದ ಶರಣರ ಪರಂಪರೆಯ ಮೌಲ್ಯಗಳನ್ನು ಮರಳಿ ಸ್ಮರಿಸುವ ವೇದಿಕೆಯಾಗಿದೆ ಎಂದು ಸಾಹಿತಿ ಕಣಿವೆ ಭಾರಧ್ವಾಜ್ ಆನಂದತೀರ್ಥ ಹೇಳಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು ಕದಳಿ ವೇದಿಕೆ ಹಾಗೂ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ” ವಿದ್ಯಾರ್ಥಿಗಳೆಡೆಗೆ ವಚನಗಳ ನಡಿಗೆ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶರಣರ ವ್ಯಕ್ತಿತ್ವ ಹಾಗೂ ಅವರ ಸಾಧನೆಗಳ ಘನತೆಯನ್ನು ಬಿಂಬಿಸುವ ವಚನಗಳು ಕನ್ನಡ ಸಾಹಿತ್ಯದ ಅಮೂಲ್ಯ ಸಂಪತ್ತು. ಹಾಗಾಗಿ ಶಾಲಾ ಕಾಲೇಜು ಹಂತದಿಂದಲೇ ವಿದ್ಯಾರ್ಥಿಗಳು ವಚನ ಸಾಹಿತ್ಯದ ಅರಿವು ಮೂಡಿಸಿಕೊಂಡು ಉತ್ತಮ ವ್ಯಕ್ತಿತ್ವ ಹೊಂದಲು ಭಾರದ್ವಾಜ್ ಕರೆಕೊಟ್ಟರು. ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ವಿಷಯದ ಕುರಿತು ಉಪನ್ಯಾಸ ನೀಡಿದ ವಿರಾಜಪೇಟೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ದಿಲನ್ ಮುತ್ತಣ್ಣ, ಶತ ಶತಮಾನಗಳ ಎಲ್ಲೆಯನ್ನು ಮೀರಿ ಎಷ್ಟೋ ಕಾಲದವರೆಗೂ ಜೀವಂತವಾಗಿ ಉಳಿಯಬಲ್ಲ ಸತ್ವ ವಚನಗಳಲ್ಲಿವೆ. ರಾಜಧರ್ಮ ಕ್ಷೀಣಿಸಿ ಪ್ರಜಾಧರ್ಮ ಜಾರಿಗೆ ಬಂದದ್ದು ವಚನಕಾರರ ಚಳುವಳಿಯಿಂದ. ಹನ್ನೆರಡನೇ ಶತಮಾನದಲ್ಲಿ ಮೌಢ್ಯಗಳು ಹಾಗೂ ಕಂದಾಚಾರಗಳ ಸುಳಿಯಲ್ಲಿ ಜನಸಾಮಾನ್ಯರನ್ನು ಸಿಲುಕಿಸಿ ದೇವರ ಹೆಸರಿನಲ್ಲಿ ನರಕ ಹಾಗೂ ಸ್ವರ್ಗದ ಹೆಸರಲ್ಲಿ ಶೋಷಿಸುತ್ತಿದ್ದ ಕಾಲಘಟ್ಟದಲ್ಲಿ ದೇಹವನ್ನೇ ದೇವಾಲಯವಾಗಿಸಿದ ವಚನಕಾರರು ಅಮಾಯಕ ಶೋಷಿತ ಮಂದಿಯ ಬದುಕಿನಲ್ಲಿ ಬೆಳಕು ನೀಡಿದವರು ವಚನಕಾರರು ಎಂದು ಡಾ.ದಿಲನ್ ವ್ಯಾಖ್ಯಾನಿಸಿದರು. ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಾಟು ಮೊಣ್ಣಪ್ಪ ಮಾತನಾಡಿ, ಹನ್ನೆರಡನೇ ಶತಮಾನದ ಶರಣರ ಚಿಂತನೆಗಳು ಹಾಗೂ ಆದರ್ಶಗಳನ್ನು ಮಕ್ಕಳಿಗೆ ಮನನ ಮಾಡುವ ಕೆಲಸವಾದಲ್ಲಿ ಮಕ್ಕಳಲ್ಲಿ ಸದ್ವಿಚಾರಗಳು ಬೆಳೆಯಲು ಸಹಕಾರಿಯಾಗುತ್ತದೆ. ಬಸವಣ್ಣನವರು ರಚಿಸಿದ ಕಲಬೇಡ ಕೊಲಬೇಡ ವಚನದ ಸಾರವನ್ನು ಯುವ ಜನಾಂಗ ತಿಳಿದಲ್ಲಿ ಸಮಾಜ ಸ್ವಾಸ್ಥ್ಯವಾಗುತ್ತದೆ ಎಂದು ಟಾಟು ಮೊಣ್ಣಪ್ಪ ಹೇಳಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ಸಮಿತಿ ಗೌರವ ಕಾರ್ಯದರ್ಶಿ ಬಿ.ನಟರಾಜು, ಕಾರ್ಯದರ್ಶಿ ಕೆ.ಪಿ. ಪರಮೇಶ್, ಜಿಲ್ಲಾ ನಿರ್ದೇಶಕರೂ ಆದ ನಿವೃತ್ತ ಸೈನಿಕ ಮೋಹನ್, ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಾಟುಮೊಣ್ಣಪ್ಪ, ಪೊನ್ನಂಪೇಟೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜೆ.ಎಸ್.ಲೋಕೇಶ್, ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಶೋಭಾರಾಣಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ್, ಶಾಲೆಯ ಮುಖ್ಯ ಶಿಕ್ಷಕಿ ಜಯಮ್ಮ, ನಿವೃತ್ತ ಶಿಕ್ಷಕಿ ಸುಬ್ಬಮ್ಮ, ಮಾಯಮುಡಿ ಗ್ರಾಮದ ನಿವಾಸಿಗಳಾದ ಸರೋಜ, ಲತಾ, ಅರ್ಪಿತಾ, ನೇತ್ರಾವತಿ, ಇದ್ದರು. ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು. ಶಾಲಾ ಶಿಕ್ಷಕಿ ಎಂ.ಟಿ.ಸುಮಾ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು. ಕೆ.ಬಿ.ಪುಷ್ಪಾ ಸ್ವಾಗತಿಸಿದರು. ಎಂ.ಬಿ.ಸಹನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಗಿಣಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ನಿವೃತ್ತ ಸೈನಿಕ ಮಾಯಮುಡಿಯ ಎಸ್.ಪಿ. ಮೋಹನ ಚಂದ್ರ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು.