ಮಡಿಕೇರಿ ಸೆ.30 NEWS DESK : ವಿಶ್ವ ಪ್ರವಾಸೋದ್ಯಮ ದಿನ 2024ರ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ, ಮಡಿಕೇರಿ ನಗರಸಭೆ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಇಲಾಖೆ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಹಾಗೂ ಕಾಲೇಜಿನ ಎನ್.ಸಿ.ಸಿ. ಘಟಕಗಳ ಜಂಟಿ ಸಹಯೋಗದಲ್ಲಿ “ಸ್ವಚ್ಛತಾ ಹೀ ಸೇವಾ 2024” ನಮ್ಮ ನಡೆ ಸ್ವಚ್ಛತೆಯ ಕಡೆ ಎಂಬ ಘೋಷವಾಕ್ಯದೊಂದಿಗೆ ಸ್ವಚ್ಛತಾ ರ‍್ಯಾಲಿ ನಡೆಯಿತು. ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಸ್ವಚ್ಛತಾ ರ‍್ಯಾಲಿ ಚಾಲನೆ ನೀಡಿದರು. ಈ ರ‍್ಯಾಲಿಯು ಮಡಿಕೇರಿ ನಗರದ ಚೌಕಿ ವೃತ್ತದಿಂದ ಆರಂಭಗೊಂಡು ರಾಜಾಸೀಟಿನಲ್ಲಿ ಕೊನೆಗೊಂಡಿತು. ಈ ಸಂದರ್ಭ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಅನಿತಾ ಭಾಸ್ಕರ್ ಮಾತನಾಡಿ, ಸ್ವಚ್ಛತೆಯು ಒಂದು ದಿನಕ್ಕೆ ಸೀಮಿತವಾಗದೆ ದಿನನಿತ್ಯ ಅನುಸರಿಸಬೇಕೆಂದು ಹೇಳಿದರು. ಇಂದಿನ ಯುವ ಪೀಳಿಗೆ ನಗರದ ಸ್ವಚ್ಛತೆಯನ್ನು ಕಾಪಾಡಲು ಪಣತೊಡಬೇಕೆಂದು ಹೇಳಿದರು. ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಕೆ.ಶೈಲಶ್ರೀ, ಅಲೋಕ್ ಬಿ.ಜೈ ಮತ್ತು ಅಧ್ಯಾಪಕರಾದ ಖುರ್ಷಿದ್ ಬಾನು, ಅರ್ಷಕ್ ಹಬೀಬ್ ಹಾಗೂ ಪಿ.ಜಿ.ಶರತ್ ಹಾಜರಿದ್ದರು. ಕಾಲೇಜಿನ ಎನ್.ಸಿ.ಸಿ. ಹಾಗೂ ಎನ್.ಎಸ್.ಎಸ್ ಘಟಕದ ಸುಮಾರು 60 ಸ್ವಯಂಸೇವಕರು ರ‍್ಯಾಲಿಯಲ್ಲಿ ಭಾಗವಹಿಸಿ ಸ್ವಚ್ಛತಾ ಶ್ರಮದಾನ ನಡೆಸಿದರು.