ಮಡಿಕೇರಿ ಸೆ.30 NEWS DESK : ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೊಡಗಿನ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ ಕನ್ನಡ ಚಲನಚಿತ್ರ “ಕಂದೀಲು” (The Ray of hope) ವಿಶ್ವ ವಿಖ್ಯಾತ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಅ.4ರಂದು ಪ್ರದರ್ಶನಗೊಳ್ಳಲಿದೆ. ಕೊಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದ “ಕಂದೀಲು” ಚಲನಚಿತ್ರ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾದ ಸ್ಪರ್ಧಾತ್ಮಕ ವಿಭಾಗದಲ್ಲಿ “2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ” ಯನ್ನು ತನ್ನದಾಗಿಸಿಕೊಂಡಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಈ ಚಿತ್ರ ಮೈಸೂರಿನ ಇನಾಕ್ಸ್ ಚಿತ್ರಮಂದಿರದಲ್ಲಿ ಶುಕ್ರವಾರ ಬೆಳಿಗ್ಗೆ 10.15 ಗಂಟೆಗೆ ಪ್ರದರ್ಶನಗೊಳ್ಳುತ್ತಿದೆ. ಚಿತ್ರದಲ್ಲಿ ಕಾಂತಾರ ಖ್ಯಾತಿಯ ಪ್ರಭಾಕರ್ ಕುಂದರ್ ಬಡ ರೈತ ತಂದೆಯ ಪಾತ್ರ, ಮೈಸೂರಿನ ವನಿತಾ ರಾಜೇಶ್ ತಾಯಿಯ ಪಾತ್ರ, ಗುರು ತೇಜಸ್ ಮಗನ ಪಾತ್ರ ನಿರ್ವಹಿಸಿದ್ದಾರೆ. ಕೊಡಗಿನ ಚಿತ್ರ ನಿರ್ಮಾಪಕರಾದ ಈರಮಂಡ ವಿಜಯ್ ಹಾಗೂ ಹರಿಣಿ ದಂಪತಿಯ ಪುತ್ರಿ ಬಾಲನಟಿ ಈರಮಂಡ ಕುಶಿ ಕಾವೇರಮ್ಮ ಮಗಳ ಪಾತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕೊಡಗು, ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಚಲನಚಿತ್ರ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ “ಕಂದೀಲು” ಚಲನಚಿತ್ರವನ್ನು ನೋಡುವ ಮೂಲಕ ನಿರ್ದೇಶಕರು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ನಿರ್ಮಾಪಕಿ ಯಶೋಧ ಪ್ರಕಾಶ್ ಮನವಿ ಮಾಡಿದ್ದಾರೆ. ತಮ್ಮ ನಿರ್ದೇಶನದ ಕಂದೀಲು ಚಿತ್ರ ವಿಶ್ವ ವಿಖ್ಯಾತ ಮೈಸೂರು ದಸರಾ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ಎನಿಸಿದೆ. ಅಲ್ಲದೆ ಮತ್ತಷ್ಟು ಚಿತ್ರಗಳನ್ನು ನಿರ್ಮಿಸಲು ಮತ್ತು ನಿರ್ದೇಶಿಸಲು ಸ್ಫೂರ್ತಿ ತುಂಬಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.