ಮಡಿಕೇರಿ ಸೆ.30 NEWS DESK : ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮದ ಹನುಮ ಸೇನಾ ಸಮಿತಿಯ ವತಿಯಿಂದ ಹನುಮ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯು ಸಮಿತಿಯ ಅಧ್ಯಕ್ಷ ಕೆ.ಎಸ್ .ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೂಡುಮಂಗಳೂರು ಗ್ರಾಮದ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಈ ಬಾರಿ ಮೂರನೇಯ ಅವಧಿಯ ಹನುಮ ಜಯಂತಿ ಆಚರಣೆ, ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ವಾರ್ಷಿಕ ರಥೋತ್ಸವ ಸಂದರ್ಭದ ಭಾಗವಹಿಸುವಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆದವು. ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಎರಡೂ ಗ್ರಾಮಗಳಿಗೆ ಒಂದೇ ಶೋಭಾಯಾತ್ರೆಯ ಹನುಮ ಮಂಟಪವನ್ನು ಹೊರತರುವ ಚಿಂತನೆಗಳ ಬಗ್ಗೆ ಹಾಜರಿದ್ದ ಯುವಕರ ತಂಡ, ಗ್ರಾಮಸ್ಥರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರುಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಅದರ ಅನುಗುಣವಾಗಿ ಅದ್ದೂರಿಯ ಶೋಭಾಯಾತ್ರೆಯ ವಿಗ್ರಹವನ್ನು ಸಿದ್ದ ಪಡಿಸುವ ಮತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಕುಶಾಲನಗರ ಹನುಮ ಸೇವಾ ಸಮಿತಿಯ ದಶ ಮಂಟಪಗಳ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ , ಹನುಮ ಸೇನಾ ಸಮಿತಿ ಅಧ್ಯಕ್ಷ ಕೆ.ಎಸ್. ಶಿವಕುಮಾರ್, ಉಪಾಧ್ಯಕ್ಷ ರೀಜೂ, ಕಾರ್ಯದರ್ಶಿ ಮಂಜುನಾಥ, ಸಹ ಕಾರ್ಯದರ್ಶಿ ಕೆ.ಪಿ.ರಾಜು, ಖಜಾಂಚಿ ಧರ್ಮ, ಸಮಿತಿಯ ಪ್ರಮುಖರಾದ ಕಿಶೋರ್ ಕುಮಾರ್, ಮಧು, ತಿಲಕ್, ಕೇಶವ ರೈ, ಕೆ.ವಿ.ಬಸಪ್ಪ, ಅರುಣ್ ರಾವ್, ಅನಂತ, ಸುನಿಲ್ ರಾವ್, ಕೆ.ಜಿ ಅರುಣ್ ಕುಮಾರ್, ಸುಬ್ಬಯ್ಯ, ಸೇರಿದಂತೆ ಕೂಡಿಗೆ ಕೂಡುಮಂಗಳೂರು ಗ್ರಾ.ಪಂ ಸದಸ್ಯರು, ವಿವಿಧ ಸಂಘಟನೆಯ ಪ್ರಮುಖರು, ಎರಡೂ ಗ್ರಾಮಗಳ ಯುವಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.