ಮಡಿಕೇರಿ ಸೆ.30 NEWS DESK : ಐತಿಹಾಸಿಕ ಮಡಿಕೇರಿ ದಸರಾ ಉತ್ಸವ ಒಂದೂವರೆ ಶತಮಾನದ ಉದ್ದಕ್ಕೂ ನಡೆದು ಬಂದ ಹಾದಿಯ ಪಥವನ್ನು ಗುರುತಿಸುವ ನಿಟ್ಟಿನಲ್ಲಿ ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ. ಅವರು ರಚಿಸಿರುವ ‘ಮಡಿಕೇರಿ ಜನೋತ್ಸವ ದಸರಾ ಕಾಫಿ ಟೇಬಲ್ ಪುಸ್ತಕ’ವನ್ನು ಭಾನುವಾರ ಅನಾವರಣಗೊಳಿಸಲಾಯಿತು. ನಗರದ ರೆಡ್ ಬ್ರಿಕ್ಸ್ ಹೋಟೆಲ್‍ನ ಸತ್ಕಾರ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಡಿಕೇರಿ ದಸರಾ ಜನೋತ್ಸವ ಪುಸ್ತಕವನ್ನು ಅನಾವರಣಗೊಳಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿಗಳು, ಸುಮಾರು ಒಂದೂವರೆ ಶತಮಾನದ ಮಡಿಕೇರಿ ದಸರಾ ಉತ್ಸವ ನಡೆದು ಬಂದ ಹಾದಿಯ ಬಗ್ಗೆ ಸ್ಪಷ್ಟವಾದ ಮಾಹಿತಿಗಳಿಲ್ಲ. ಇಂತಹ ಸಂದರ್ಭ ಅನಿಲ್ ಅವರು ದಸರಾ ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಪುಸ್ತಕವೊಂದನ್ನು ಹೊರ ತಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂಬರುವ ದಿನಗಳಲ್ಲಿ ಮಡಿಕೇರಿ ದಸರಾ ಉತ್ಸವ ನಡೆಸಿರುವ ಬಗ್ಗೆ ಸಮಗ್ರ ‘ದಾಖಲೀಕರಣ’ ಮಾಡಲಾಗುತ್ತದೆಂದು ತಿಳಸಿದರು. ಮಡಿಕೇರಿ ಮತ್ತು ಮೈಸೂರು ದಸರಾ ಉತ್ಸವ ಆಚರಣೆಗೆ ಸಾಕಷ್ಟು ವ್ಯತ್ಯಾಸಗಳಿದೆ. ಆದರೆ, ಮಡಿಕೇರಿ ದಸರಾ ಯಾವ ರೀತಿಯಲ್ಲಿ ಆರಂಭವಾಯಿತು, ಬದಲಾವಣೆಗಳಿಗೆ ಹೇಗೆ ತೆರೆದುಕೊಂಡಿತು ಎನ್ನುವ ಬಗ್ಗೆ ದಾಖಲೆಗಳಿಲ್ಲ. ಈ ಹಿನ್ನೆಲೆ ಮಡಿಕೇರಿ ದಸರಾ ಕಾರ್ಯಕ್ರಮಗಳು ಯಾವ ರೀತಿಯಾಗಿ ನಡೆದಿದೆ, ಶೋಭಾ ಯಾತ್ರೆಯಲ್ಲಿ ಮಂಟಪಗಳಲ್ಲಿ ಪ್ರದರ್ಶಿಸಲ್ಪಡುವ ಪೌರಾಣಿಕ ವಿಷಯಗಳಿರಬಹುದು, ಸ್ಥಳೀಯ ಸಂಸ್ಕøತಿಯನ್ನು ಪ್ರತಿಬಿಂಬಿಸುವ ವಿಚಾರಗಳಿರಬಹುದು ಅವುಗಳನ್ನು ದಾಖಲಿಸುವುದು ಅವಶ್ಯ. ಇದು ಮುಂದೆ ದಸರಾ ಉತ್ಸವ ಆಚರಿಸುವವರಿಗೆ ಮಾರ್ಗದರ್ಶಕವಾಗಲಿದೆಯೆಂದು ಅಭಿಪ್ರಾಯಿಸಿದರು. ಮಡಿಕೇರಿ ದಸರಾ ಶೋಭಾಯಾತ್ರೆಯ ದಶ ಮಂಟಪಗಳಲ್ಲಿ ಪ್ರದರ್ಶಿತವಾಗುವ ಕಲಾ ಕೃತಿಗಳು, ಕಥೆಯನ್ನು ಪ್ರಸ್ತುತ ಪಡಿಸುವ ಅಂಶಗಳನ್ನು ದಾಖಲಿಸಿಕೊಂಡು ವಿಭಿನ್ನ ಭಾಷೆಗಳಲ್ಲಿ ಯೂ ಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚುರ ಪಡಿಸಿದರೆ, ಹೊರಗಿನವರಿಗೂ ಮಡಿಕೇರಿ ದಸರಾ ವಿಚಾರಗಳು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆಂದು ತಿಳಸಿದರು.
ದಸರಾ ಪ್ರಚಾರದಲ್ಲಿ ಸೋತಿದ್ದೇವೆ :: ಪ್ರಸ್ತಾವಿಕವಾಗಿ ಮಾತನಾಡಿದ ಲೇಖಕ ಅನಿಲ್ ಹೆಚ್.ಟಿ. ಅವರು, ಮಡಿಕೇರಿ ದಸರಾ ಉತ್ಸವವನ್ನು ಸಮರ್ಪಕವಾಗಿ ಹೊರ ಜಿಲ್ಲೆ ರಾಜ್ಯಗಳಲ್ಲಿ ಪ್ರಚಾರ ಪಡಿಸುವಲ್ಲಿ ನಾವಿಂದು ಸೋತಿದ್ದೇವೆ. ನಿಜಕ್ಕಾದರೆ, ವಿಶಿಷ್ಟವಾದ ಮಡಿಕೇರಿ ದಸರಾವನ್ನು ಬೆಂಗಳೂರು, ಚೆನ್ನೈ, ಮುಂಬೈಗಳಲ್ಲಿ ಪ್ರಚಾರ ಪಡಿಸುವ ಅಗತ್ಯವಿದೆಯೆಂದು ತಿಳಿಸಿದರು. ದಸರಾ ಉತ್ಸವ ಸಂದರ್ಭ ಶಾಸ್ತ್ರೀಯ ಸಂಗೀತ, ಜಾನಪದ , ಭಾವಗೀತೆ ಪ್ರಕಾರಗಳ ಪ್ರದರ್ಶನ ಹಿಂದೆ ಬಿದ್ದು, ಫ್ಯೂಷನ್ ಮುನ್ನೆಲೆಗೆ ಬಂದು ನಿಂತಿದೆ. ಈ ಹಿನ್ನೆಲೆ ದಸರಾ ಸಂದರ್ಭ ನಮ್ಮ ಸಂಸ್ಕøತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಮತ್ತೊಂದು ವೇದಿಕೆಯಲ್ಲಿ ಪ್ರದರ್ಶಿಸುವ ಪ್ರಯತ್ನಗಳು ನಡೆಯಬೇಕಾಗಿದೆ ಎಂದರು. ಸನ್ಮಾನ- ಇದೇ ಸಂದರ್ಭ ಮಡಿಕೇರಿ ದಸರಾಕ್ಕೆ ರೂಪುರೇಷೆ ನೀಡಿದ್ದ ದಿ. ಭೀಮ್ ಸಿಂಗ್ ಅವರ ಪುತ್ರಿ ಶಾರದಾಬಾಯಿಯವರ ಪರವಾಗಿ ಅವರ ಮಕ್ಕಳಾದ ರವಿ ಕುಮಾರ್ ಮತ್ತು ವಾಸಂತಿ ಅವರನ್ನು ಹಾಗೂ ದಸರಾ ಮಂಟಪಗಳಿಗೆ ವಿನೂತನ ವಿನ್ಯಾಸ ನೀಡಿದ್ದ ನಗರದ ಹಿರಿಯ ಶಿವರಾಮ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಾಜಿ ವಿಧಾನ ಸಭಾಧ್ಯಕ್ಷರಾದ ಕೆ.ಜಿ. ಬೋಪಯ್ಯ, ಮಾಜಿ ಸಚಿವರಾದ ಎಂ.ಪಿ. ಅಪ್ಪಚ್ಚು ರಂಜನ್, ಎಎಸ್‍ಪಿ ಕೆ.ಎಸ್. ಸುಂದರರಾಜ್,ಮಡಿಕೇರಿ ದಸರಾ ಸಮಿತಿ ಗೌರವಾಧ್ಯಕ್ಷರಾದ ಜಿ. ಚಿದ್ವಿಲಾಸ್, ಕಾರ್ಯಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಅರುಣ್ ಶೆಟ್ಟಿ, ದಶ ಮಂಟಪ ಸಮಿತಿ ಅಧ್ಯಕ್ಷರಾದ ಜಗದೀಶ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಉಪಸ್ಥಿತರಿದ್ದರು. ಸಂಧ್ಯಾ ಚಿದ್ವಿಲಾಸ್, ಚಿತ್ರಾನಂಜಪ್ಪ ತಂಡ ಪ್ರಾರ್ಥಿಸಿದರು. ಎಸ್‍ಐ ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಸನ್ಮಾನಿತರ ಪರಿಚಯವನ್ನು ಶಿಕ್ಷಕಿಯರಾದ ಪ್ರತಿಮಾ ರೈ ಮತ್ತು ಜಲಲಕ್ಷ್ಮಿ ಅವರು ಮಾಡಿಕೊಟ್ಟರು.