ಮಡಿಕೇರಿ ಅ.2 NEWS DESK : ಮಹಾತ್ಮ ಗಾಂಧೀಜಿಯವರು ‘ನನ್ನ ಜೀವನವೇ, ನನ್ನ ಸಂದೇಶ’ ಎಂದು ಸಾರಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಬದುಕು ಜೀವನದ ಸಂದೇಶವಾಗುವಂತೆ ಬಾಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರತಿಪಾದಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಪದವಿ ಪೂರ್ವ ಶಿಕ್ಷಣ, ಕಾಲೇಜು ಶಿಕ್ಷಣ ಇಲಾಖೆ, ನಗರಸಭೆ, ಸರ್ವೋದಯ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು, ಸ್ಕೌಟ್ಸ್ ಮತ್ತು ಗೈಡ್ಸ್, ಜಾನಪದ ಪರಿಷತ್ತು ಹಾಗೂ ಭಾರತೀಯ ಸೇವಾದಳದ ಸಹಕಾರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 155ನೇ ಮತ್ತು ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜನ್ಮ ವರ್ಷಾಚರಣೆ ಪ್ರಯುಕ್ತ ನಗರದ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನುಡಿದಂತೆ ನಡೆಯುವ ಶಿಸ್ತನ್ನು ಮಹಾತ್ಮ ಗಾಂಧೀಜಿಯವರಂತೆ ಎಲ್ಲರೂ ಜೀವನದಲ್ಲಿ ಪಾಲಿಸಬೇಕು. ಹಾಗಾಗಿ ವಿಶ್ವಸಂಸ್ಥೆ ಸೇರಿದಂತೆ ದೇಶ ವಿದೇಶಗಳಲ್ಲಿಯೂ ಸಹ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ಕಾಣಬಹುದಾಗಿದೆ ಎಂದು ವೆಂಕಟ್ ರಾಜಾ ಹೇಳಿದರು. ವಿಶ್ವ ಸಂಸ್ಥೆಯು ಗಾಂಧೀಜಿ ಜನ್ಮ ದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಘೋಷಿಸಿ, ಆಚರಿಸುತ್ತಿದೆ ಎಂದು ತಿಳಿಸಿದರು. ವಿಶ್ವ ನಾಯಕರು ಮಹಾತ್ಮ ಗಾಂಧೀಜಿಯವರ ಜೀವನ ಬೋಧನೆಯನ್ನು ಪಾಲಿಸುತ್ತಾರೆ. ಮಾಹತ್ಮ ಗಾಂಧೀಜಿಯವರ ಜೀವನ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಅವರ ಸರಳ ಜೀವನ ಎಲ್ಲರಿಗೂ ಮಾದರಿ ಎಂದು ವೆಂಕಟ್ ರಾಜಾ ವಿವರಿಸಿದರು. ಸರ್ವೋದಯ ಸಮಿತಿ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಭಾರತಕ್ಕೆ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರು ಇಡೀ ವಿಶ್ವಕ್ಕೆ ಶಾಂತಿ ಸ್ಥಾಪಿಸಿದ್ದರು ಎಂದು ನುಡಿದರು. ಮಹಾತ್ಮ ಗಾಂಧೀಜಿ ಅವರು ಎಲ್ಲರನ್ನೂ ಒಟ್ಟುಗೂಡಿಸಿ ಸ್ವಾತಂತ್ರ್ಯ ಪಡೆಯಲು ಶ್ರಮಿಸಿದರು. ಸ್ವಾತಂತ್ರ್ಯಕ್ಕಾಗಿ ರಾಷ್ಟ್ರದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಿದರು ಎಂದು ಟಿ.ಪಿ.ರಮೇಶ್ ವಿವರಿಸಿದರು. ಗಾಂಧೀಜಿಯವರು ಜಗತ್ತು ಕಂಡ ಒಬ್ಬ ಶ್ರೇಷ್ಠ ಸಮಾಜ ಸುಧಾರಕ, ಸತ್ಯಾಗ್ರಹಿ, ಪತ್ರಕರ್ತರಾಗಿ ಗ್ರಾಮ ಸ್ವರಾಜ್ಯದ ಹರಿಕಾರರಾಗಿ ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು. ಲಾಲ್ ಬಹದ್ದೂರು ಶಾಸ್ತ್ರಿ ಅವರು ಭಾರತದ ಎರಡನೇ ಪ್ರಧಾನಮಂತ್ರಿಯಾಗಿ ಸರಳ, ಸಜ್ಜನಿಕೆಗೆ ಹೆಸರುವಾಸಿಯಾಗಿದ್ದರು. ಸೇನೆ ಮತ್ತು ಕೃಷಿಗೆ ಹೆಚ್ಚಿನ ಮಹಾತ್ವಾಕಾಂಕ್ಷೆ ನೀಡಿದ್ದರು ಎಂದರು. ಮೋಹನ್ ದಾಸ ಕರಮಚಂದ ಗಾಂಧೀ ಅವರು ಸಾಮಾನ್ಯರಾಗಿ ಹುಟ್ಟಿ ಸರಳ, ನೇರ ನಡೆನುಡಿಗಳಿಂದ ಎತ್ತರಕ್ಕೆ ಬೆಳೆದು ಸತ್ಯ, ಶಾಂತಿ, ಅಹಿಂಸೆ ಎಂಬ ಮಹಾಅಸ್ತ್ರಗಳಿಂದ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮ ಎಂದು ಟಿ.ಪಿ.ರಮೇಶ್ ಬಣ್ಣಿಸಿದರು. ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಮಾತನಾಡಿ, ಗಾಂಧೀಜಿಯವರ ವಿಚಾರಧಾರೆಗಳನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರೂ ಪುಸ್ತಕ ಹಾಗೂ ಪತ್ರಿಕೆಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಹೇಳಿದರು. ಭಾರತ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿಯವರು ಅಹಿಂಸಾ ಮಾರ್ಗದ ಮೂಲಕ ಹೋರಾಡಿದ್ದಾರೆ. ಸತ್ಯಕ್ಕಾಗಿ ಹೋರಾಟ ಗಾಂಧೀಜಿಯವರು ಕಲಿಸಿದ ಪಾಠವಾಗಿದೆ ಎಂದು ತಿಳಿಸಿದರು. ಅಹಿಂಸಾ ಮಾರ್ಗದಿಂದ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾತ್ಮ ಗಾಂಧೀಜಿಯವರು ಅನುಸರಿಸಿದ ಸರಳ ಸಜ್ಜನಿಕೆಯ ವ್ಯಕ್ತಿತ್ವ ಮಹಾತ್ಮರನ್ನಾಗಿ ಮಾಡಿತು ಎಂದು ಅನಂತಶಯನ ನುಡಿದರು. ‘ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಮಾತನಾಡಿ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯದ ಪ್ರತೀಕ, ಗ್ರಾಮ ಸ್ವರಾಜ್ಯದ ಸಕಾರ ಮೂರ್ತಿ, ಎಲ್ಲರ ಮೆಚ್ಚಿನ ಬಾಪು ಎಂದು ವರ್ಣಿಸಿದರು.’ ಗ್ರಾಮ ಅಭ್ಯೋದಯದ ಪರಿಕಲ್ಪನೆಯನ್ನು ಮಹಾತ್ಮ ಗಾಂಧೀಜಿಯವರು ಭಿತ್ತಿದ್ದಾರೆ. ಮಹಾತ್ಮ ಗಾಂಧೀಜಿಯವರು ಸದ್ಗುಣಗಳ ಸಂಪನ್ನ ಮೂರ್ತಿಯಾಗಿದ್ದಾರೆ ಎಂದು ವಿವರಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್‍ನ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯೂ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಕರ್ನಾಟಕ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿ, ಕೊಡಗು ಜಿಲ್ಲೆಗೂ ಭೇಟಿ ನೀಡಿದ್ದು ವಿಶೇಷವಾಗಿದೆ ಎಂದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ರಾಣಿ ಮಾಚಯ್ಯ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪ ನಿರ್ದೇಶಕರಾದ ಸಿ.ರಂಗಧಾಮಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸಿದ್ದೇಗೌಡ, ತಹಶೀಲ್ದಾರ್ ಪ್ರವೀಣ್ ಕುಮಾರ್, ಪೌರಾಯುಕ್ತರಾದ ರಮೇಶ್, ಬಿಸಿಎಂ ಇಲಾಖೆ ಅಧಿಕಾರಿ ಕವಿತಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಸ್ಕೌಟ್ಸ್ ಮತ್ತು ಗೈಡ್ಸ್‍ನ ದಮಯಂತಿ, ಅಂಬೆಕಲ್ಲು ನವೀನ್, ಸಂಪತ್ ಕುಮಾರ್, ಟಿ.ಎಂ.ಮುದ್ದಯ್ಯ, ಹರಿಣಿ ಇತರರು ಇದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಸ್ವಾಗತಿಸಿದರು, ಕನ್ನಡ ಸಾಹಿತ್ಯ ಪರಿಷತ್ತು ತಂಡದವರು ನಾಡಗೀತೆ ಹಾಡಿದರು, ಕಲಾವಿದ ಈ.ರಾಜು ಮತ್ತು ತಂಡದವರು ಆಶಯ ಗೀತೆ ಹಾಡಿದರು. ವಿನೋದ್ ಮೂಡಗದ್ದೆ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಧ್ವಜಾರೋಹಣ ನೆರವೇರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಪ್ರತಿಜ್ಞಾ ವಿಧಿ ಬೋಧಿಸಿದರು. ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಗಾಂಧಿಭವನ ವರೆಗೆ ಸ್ವಚ್ಛತಾ ಜಾಥ ನಡೆಯಿತು. ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿರುವ ಬೀದಿನಾಟಕ ಹಾಗೂ ಸಂಗೀತ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೇರಿದಂತೆ ಗಣ್ಯರು ಚಾಲನೆ ನೀಡಿದರು.
ಬಹುಮಾನ ವಿತರಣೆ :: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮ ಗಾಂಧೀಜಿಯವರ ಕುರಿತು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ, ಪದವಿ ಪೂರ್ವ ಹಾಗೂ ಪದವಿ/ಸ್ನಾತಕೋತ್ತರ ಪದವಿ ಈ ಮೂರು ವಿಭಾಗದಲ್ಲಿ ವಿಜೇತರಾದ ತಲಾ ಮೂವರು ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ಗಣ್ಯರು ವಿತರಿಸಿದರು.