
ಮಡಿಕೇರಿ ಅ.3 NEWS DESK : ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಯನ್ನು ನೀಡುತ್ತಿರುವ ಕೊಡವ ಮಕ್ಕಡ ಕೂಟ ಈಗಾಗಲೇ 94 ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು, ಮಹತ್ವಾಕಾಂಕ್ಷೆಯ 100ನೇ ಪುಸ್ತಕವನ್ನು ನವೆಂಬರ್ ತಿಂಗಳಿನಲ್ಲಿ ಅದ್ದೂರಿಯಾಗಿ ಸಮರ್ಪಿಸಲಾಗುವುದು ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 94ನೇ ಪುಸ್ತಕ, ಬರಹಗಾರ್ತಿ ಬೊಟ್ಟೋಳಂಡ ನಿವ್ಯ ದೇವಯ್ಯ ಅವರ 2ನೇ ಪುಸ್ತಕ “ಏಳ್ ದಿನಕ್ಕೊಮ್ಮ… ಬ್ರಹ್ಮಗಿರಿಲ್” ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕøತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ದಾಖಲೆಯ ಪುಸ್ತಕಗಳನ್ನು ಬಿಡುಗಡೆ ಮಾಡಿ ಹಿರಿಯ ಹಾಗೂ ಕಿರಿಯ ಬರಹಗಾರರಿಗೆ ಪ್ರೋತ್ಸಾಹವನ್ನು ನೀಡಿದೆ. ಯುವ ಬರಹಗಾರರಿಗೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿಯನ್ನು ತುಂಬಿದೆ ಎಂದರು. ಕೂಟದ ಮೂಲಕ 99ನೇ ಪುಸ್ತಕವಾಗಿ ಲೇಖಕಿ ತೆನ್ನಿರ ಟೀನಾ ಚಂಗಪ್ಪ ಅವರು ಬರೆದಿರುವ “ಈ ಮಣ್ಣ್ ರ ಋಣ” ಕಾದಂಬರಿಯನ್ನು ಅ.26 ರಂದು ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಲಾಗುವುದು. ನೂರನೇ ಪುಸ್ತಕದಲ್ಲಿ ಜಿಲ್ಲೆಯ ಹಿರಿಯ ಹಾಗೂ ಕಿರಿಯ ಲೇಖಕರ ಕನ್ನಡ, ಕೊಡವ, ಮತ್ತು ಇಂಗ್ಲೀಷ್ ಭಾಷೆಯ ಬರಹಗಳು ಹಾಗೂ ಲೇಖನಗಳು ಸಮಗ್ರವಾಗಿ ಅಡಕವಾಗಿರುತ್ತವೆ. ಈಗಾಗಲೇ 35ಕ್ಕೂ ಹೆಚ್ಚು ಲೇಖನಗಳು ಬಂದಿದ್ದು, ಆಸಕ್ತರು ಕಥೆ, ಕವನ, ಚುಟುಕು, ಲೇಖನ, ಕೊಡಗು ಜಿಲ್ಲೆ ಮತ್ತು ಸ್ಥಳೀಯ ಸಂಸ್ಕøತಿ, ಆಚಾರ, ವಿಚಾರ, ಸ್ಥಳ ಪರಿಚಯಕ್ಕೆ ಸಂಬಂಧಿಸಿದ ಬರಹಗಳನ್ನು ಕಳುಹಿಸಬಹುದಾಗಿದೆ. ನವೆಂಬರ್ ತಿಂಗಳಿನಲ್ಲಿ 100ನೇ ಪುಸ್ತಕವನ್ನು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಬೊಳ್ಳಜಿರ ಅಯ್ಯಪ್ಪ ತಿಳಿಸಿದರು. ಇಲ್ಲಿಯವರೆಗೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 94 ಪುಸ್ತಕಗಳನ್ನು ಕೊಡವ ಮಕ್ಕಡ ಕೂಟ ಬಿಡುಗಡೆ ಮಾಡಿದೆ. ಪ್ರಕಟಿಸಿರುವ 93 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ “ಗೌರಮ್ಮ ದತ್ತಿ ನಿಧಿ” ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಈಗಾಗಲೇ ಆರು ಪುಸ್ತಕಗಳು ತಯಾರಿ ಹಂತದಲ್ಲಿದ್ದು, ಆ ಮೂಲಕ ಒಟ್ಟು 100 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸುವ ಗುರಿ ಹೊಂದಿರುವುದಾಗಿ ಬೊಳ್ಳಜಿರ ಅಯ್ಯಪ್ಪ ಹೇಳಿದರು. “ಏಳ್ ದಿನಕ್ಕೊಮ್ಮ… ಬ್ರಹ್ಮಗಿರಿಲ್” ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಮಾಜ ಸೇವಕ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಪುಸ್ತಕ ಬರೆಯುವ ಮತ್ತು ಓದುವವರ ಸಂಖ್ಯೆ ಕಡಿಮೆಯಾಗಿದೆ. ಇದರ ನಡುವೆಯೇ ಹೊಸ ಬರಹಗಾರರಿಗೆ ಸಮಾನ ಮನಸ್ಕರು ಸೇರಿ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಬಾಲ್ಯದಿಂದಲೇ ಸಾಹಿತ್ಯ ಆಸಕ್ತಿ ಮೂಡಿಸುವ ಕಾರ್ಯವಾಗಬೇಕು ಎಂದರು. ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಕೊಡವ ಮಕ್ಕಡ ಕೂಟದ ಸೇವೆ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. “ಏಳ್ ದಿನಕ್ಕೊಮ್ಮ… ಬ್ರಹ್ಮಗಿರಿಲ್” ಪುಸ್ತಕದ ಬರಹಗಾರ್ತಿ ಬೊಟ್ಟೋಳಂಡ ನಿವ್ಯ ದೇವಯ್ಯ ಮಾತನಾಡಿ ಸಮಯ ಮತ್ತು ಅವಕಾಶವನ್ನು ಸದ್ಬಳಕೆ ಮಾಡಿಕೊಂಡರೆ ಪುಸ್ತಕ ರಚನೆ ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಬರಹಕ್ಕೆ ಬೆಲೆ ನೀಡುವ ಕಾರ್ಯವನ್ನು ಕೊಡವ ಮಕ್ಕಡ ಕೂಟ ಮಾಡುತ್ತಿದೆ. ಕೂಟ ಅವಕಾಶ ನೀಡಿದ ಕಾರಣದಿಂದ ನನಗೆ ಎರಡನೇ ಪುಸ್ತಕ ಬರೆಯಲು ಸಾಧ್ಯವಾಯಿತು. ಆರ್ಥಿಕ ನೆರವು ಮತ್ತು ಪ್ರೋತ್ಸಾಹ ಎರಡೂ ಕೂಡ ಸಿಕ್ಕಿದೆ ಎಂದರು. ಸಮಾಜ ಸೇವಕ ಪೆಮ್ಮಡಿಯಂಡ ಎಂ.ಉತ್ತಪ್ಪ ಮಾತನಾಡಿ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು. ಬರಹಗಾರರಾದ ಐಚಂಡ ರಶ್ಮಿ ಮೇದಪ್ಪ ಮಾತನಾಡಿ ಕವಿಗಳು ತಮ್ಮ ಭಾವನೆಗಳನ್ನು ಬರಹದ ರೂಪದಲ್ಲಿ ಅಭಿವ್ಯಕ್ತಪಡಿಸುತ್ತಾರೆ. ಆ ಮೂಲಕ ಓದುಗರ ಮನಸ್ಸನ್ನು ಗೆಲ್ಲುತ್ತಾರೆ. ಕೊಡವ ಮಕ್ಕಡ ಕೂಟದಿಂಸ ಆದಷ್ಟು ಶೀಘ್ರ 100ನೇ ಪುಸ್ತಕ ಬಿಡುಗಡೆಯಾಗಲಿ ಎಂದು ಶುಭ ಹಾರೈಸಿದರು. ವ್ಯಾಲಿಡ್ಯೂ ಕಲ್ಚರಲ್ ಅಸೋಸಿಯೇಷನ್ ನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಉಪಸ್ಥಿತರಿದ್ದರು.
:: ನಿವ್ಯ ಪರಿಚಯ ::
:: ಬೊಟ್ಟೋಳಂಡ ನಿವ್ಯ ದೇವಯ್ಯ :: ಸಣ್ಣಪುಲಿಕೋಟ್ ಗ್ರಾಮದ ಪೆಮ್ಮಡಿಯಂಡ ಶಂಭು ಮುದ್ದಪ್ಪ ಮತ್ತು ದೇಚವ್ವ (ಕಮಲ) ದಂಪತಿಯ ದ್ವಿತೀಯ ಪುತ್ರಿ ಕಾವೇರಮ್ಮ (ನಿವ್ಯ) 19.04.1991ರಲ್ಲಿ ಜನಿಸಿದರು. ಇವರ ಅಕ್ಕ ಐಮುಡಿಯಂಡ ನವ್ಯ ಪ್ರದೀಪ್. ಬೊಟ್ಟೋಳಂಡ ನಿವ್ಯ ದೇವಯ್ಯ ಮಡಿಕೇರಿಯ ರಾಜರಾಜೇಶ್ವರಿ ಕಾಲೇಜಿನಲ್ಲಿ ಹೈಸ್ಕೂಲ್, ಪಿ.ಯು.ಸಿ ಮುಗಿಸಿದ್ದು, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಬಿ.ಬಿ.ಎಂ ವ್ಯಾಸಂಗ ಮುಗಿಸಿದ್ದಾರೆ. ಇವರು ಚಿಕ್ಕ ವಯಸ್ಸಿನಿಂದಲೇ ಕೊಡವ ವಾರಪತ್ರಿಕೆ ಬ್ರಹ್ಮಗಿರಿ, ಕನ್ನಡ ದಿನ ಪತ್ರಿಕೆ ಶಕ್ತಿ, ಪೊಂಗುರಿ ಸೇರಿದಂತೆ ವಿವಿಧ ಸಂಚಿಕೆಗಳಲ್ಲಿ ಸಣ್ಣ ಸಣ್ಣ ಕವನ, ಕಥೆ, ವೈಚಾರಿಕ ಬರೆಯುತ್ತಿದ್ದರೂ. ಅಲ್ಲದೆ ರೆಡಿಯೋ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಇವರು ಬಲ್ಲಮಾವಟಿಯ ಬೊಟ್ಟೋಳಂಡ ಸಚ್ಚಿನ್ ದೇವಯ್ಯ ಅವರನ್ನು ವಿವಾಹವಾಗಿದ್ದಾರೆ. ಮಡಿಕೇರಿಯಲ್ಲಿ ವಾಸವಿರುವ ಇವರಿಗೆ ಕಶ್ವಿಕನ್ನಿಕೆ ಮತ್ತು ಧನ್ವಿಕ್ ಬೋಪಣ್ಣ ಎಂಬ ಇಬ್ಬರು ಮಕ್ಕಳಿದ್ದಾರೆ.
ತಿರಿಬೊಳ್‍ಚ ಕೊಡವ ಸಂಘ ಮಡಿಕೇರಿಯ ಸಹಕಾರ್ಯದರ್ಶಿ, ಕೊಡವಾಮೆರ ಕೊಂಡಾಟ ಕೂಟ, ಪೊಮ್ಮಕ್ಕಡ ಕೂಟ, ಸಿರಿಗನ್ನಡ ವೇದಿಕೆ, ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಸರಾ ಕವಿಗೋಷ್ಠಿ ಮಡಿಕೇರಿ, ಹಾಡು, ಬರಹ, ನೃತ್ಯ ಸೇರಿದಂತೆ ಕೊಡವಾಮೆಗಾಗಿ, ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇವರ ಬರಹಗಳನ್ನು ಮೆಚ್ಚಿ ತಾಮನೆ ಪೆಮ್ಮಡಿಯಂಡ ಒಕ್ಕಕಾರ ಮತ್ತು ಮಕ್ಕಂದೂರು ಕೊಡವ ಸಮಾಜದ ವತಿಯಿಂದ ಸನ್ಮಾನ ಮಾಡಲಾಗಿದೆ. ಈಗಾಗಲೇ “ನಾ ಕಂಡ ಪಳೆಯಾಮೆ” ಎನ್ನುವ ಕೊಡವ ಪುಸ್ತಕ ಬಿಡುಗಡೆಗೊಂಡಿದ್ದು, ಇದೀಗ ಇವರ ಏಳ್‍ದಿನಕೊಮ್ಮ… ಬ್ರಹ್ಮಗಿರಿಲ್ ಪುಸ್ತಕ ಬಿಡುಗಡೆಗೊಂಡಿದೆ.










