ಮಡಿಕೇರಿ ಅ.3 NEWS DESK : ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಅ.11 ರಂದು ಗೋಣಿಕೊಪ್ಪಲು ದಸರಾ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಗೋಣಿಕೊಪ್ಪಲಿನ ದಸರಾ ವೇದಿಕೆಯಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಪ್ರತಿವರ್ಷದಂತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ, ತಮಿಳು, ಮಲೆಯಾಳಂ, ಮರಾಠಿ ಸೇರಿದಂತೆ 13 ಭಾಷೆಯ ಕವನಗಳನ್ನು 78 ಕವಿಗಳು ಕವನಗಳನ್ನು ವಾಚಿಸಲಿದ್ದಾರೆ ಎಂದು ತಿಳಿಸಿದರು. ಕನ್ನಡ ಭಾಷೆಯ ಚುಟುಕು ಕವನ 4 ಕವಿಗಳು ವಾಚಿಸಲಿದ್ದಾರೆ. ಬೆಳೆಯ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಮತ್ತು ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಮೂಡಿಸುವ ಸಲುವಾಗಿ ಈ ಬಾರಿ ವಿಶೇಷವಾಗಿ ಮಕ್ಕಳ ಕವನಗೋಷ್ಠಿ (6 ರಿಂದ 13 ) ಏರ್ಪಡಿಸಲಾಗಿದೆ. 11 ಬಾಲ ಪ್ರತಿಭೆಗಳು ಕವನ ವಾಚನ ಮಾಡಲಿದ್ದಾರೆ. ಕನ್ನಡದಲ್ಲಿ 6 ಮತ್ತು ಇಂಗ್ಲೀಷಿನಲ್ಲಿ 5 ಬಾಲ ಕವಿಗಳು ಕವನ ವಾಚನ ಮಾಡಲಿದ್ದಾರೆ. ಕವಿಗೋಷ್ಠಿಗೆ ಆಗಮಿಸುವ ಎಲ್ಲಾ ಕವಿಗಳಿಗೂ ಗೌರವದಿಂದ ವೇದಿಕೆಗೆ ಆಹ್ವಾನಿಸಿ ಕವನ ವಾಚನದ ನಂತರ ಅವರಿಗೆ ಗೌರವ ಸಮರ್ಪಣೆ, ಸಂಭಾವನೆ ಮತ್ತು ಕೊಡಗಿನ ಲೇಖಕರ ಒಂದು ಪುಸ್ತಕವನ್ನು ಕೂಡ ನೀಡಲಾಗುವುದು. ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಸುಳ್ಯ, ಬೆಳಗಾವಿ, ಮೈಸೂರು ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ತಮ್ಮ ಕವನವನ್ನು ಕಳುಹಿಸಿದ್ದಾರೆ. ಜೊತೆಗೆ ಇದೇ ಸಂದರ್ಭದಲ್ಲಿ ಒಂದು ಸಾಹಿತಿಕ ಕಾರ್ಯವು ಕೂಡ ನಡೆಯಲಿದೆ ಜಿಲ್ಲೆಯ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರು ಅಂಕಣಕಾರರಾಗಿ ಹಲವಾರು ಪತ್ರಿಕೆಗಳಲ್ಲಿ ಪ್ರಕಟಿಸಿದ 67 ಲೇಖನಗಳನ್ನು ಪುಸ್ತಕ ರೂಪದಲ್ಲಿ ಲೇಖನ ಸೌರಭ ಎನ್ನುವ ಹೆಸರಿನಲ್ಲಿ ಪ್ರಕಟಪಡಿಸಿದ್ದಾರೆ ಅದರ ಬಿಡುಗಡೆ ಕಾರ್ಯಕ್ರಮವು ಕೂಡ ಅಂದು ಜರುಗಲಿದೆ ಎಂದರು. ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಶ್ರೀ ಕಾವೇರಿ ದಸರಾ ಸಮಿತಿ ನಾಡಿನ ಸಾಹಿತ್ಯ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ 10 ದಿನಗಳ ಕಾಲ ಪ್ರತಿದಿನವೂ ದೇವಿಯ ಪ್ರತಿಷ್ಠಾಪನೆಯೊಂದಿಗೆ ಶಾಸ್ತ್ರೋಕ್ತವಾದ ಪೂಜಾ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡು ಬರುತ್ತಿದೆ. ಸಾಹಿತ್ಯ ಕಲೆ ಇವುಗಳ ಪ್ರೋತ್ಸಾಹಕ್ಕಾಗಿ ಹಲವಾರು ವರ್ಷಗಳಿಂದ ಬಹು ಭಾಷಾ ಕವಿಗೋಷ್ಠಿ ಯನ್ನು ಕನ್ನಡ ಸಾಹಿತ್ಯ ಪರಿಷತ್ ನೊಂದಿಗೆ ಜೊತೆಗೂಡಿ ನಡೆಸುತ್ತಿದೆ. ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು ಸೇರಿ ಉತ್ತಮ ರೀತಿಯ ಕವನ ವಾಚನ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು. ಕವಿಗೋಷಿ ಸಮಿತಿಯ ಅಧ್ಯಕ್ಷ ಕೋಳೆರ ದಯ ಚಂಗಪ್ಪ ಮಾತನಾಡಿ, ಗೋಣಿಕೊಪ್ಪಲಿನ ದಸರಾ ವೇದಿಕೆಯಲ್ಲಿ ನಡೆಯುವ ಈ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲೆಯ ಹಿರಿಯ ಸಾಹಿತಿಗಳು ಮತ್ತು ಕವಿಗಳು ನಾಗೇಶ್ ಕಾಲೂರು ವಹಿಸಲಿದ್ದು, ಉದ್ಘಾಟನೆಯನ್ನು ಜಿಲ್ಲೆಯ ಹಿರಿಯ ಪತ್ರಕರ್ತರು, ದಿ ಹಿಂದು ಪತ್ರಿಕೆಯ ಪ್ರಿನ್ಸಿಪಲ್ ಸಂಪಾದಕ ಜೀವನ್ ಚಿಣ್ಣಪ್ಪ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿಗಳು ನಿವೃತ್ತ ಪ್ರಾಂಶುಪಾಲರು ಆದ ಡಾ. ಜೆ.ಸೋಮಣ್ಣ ಭಾಗವಹಿಸಲಿದ್ದಾರೆ. ಅಲ್ಲದೆ ವೇದಿಕೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೋಳೆರ ದಯಾ ಚಂಗಪ್ಪ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷರು ಮತ್ತು ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕವಿಗೋಷ್ಠಿ ಸಮಿತಿ ಸಂಚಾಲಕಿ ಎಸ್.ಎಂ ರಜಿನಿ, ಗೌರವ ಕಾರ್ಯದರ್ಶಿ ಶೀಲಾ ಬೋಪಣ್ಣ, ಕಾವೇರಿ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಂದಾದೇವಯ್ಯ ಉಪಸ್ಥಿತರಿರುತ್ತಾರೆ ಎಂದರು. ಬಹುಭಾಷಾ ಕವಿಗೋಷ್ಠಿಯ ಸಂಚಾಲಕಿ ಎಸ್.ಎಂ.ರಜನಿ ಮಾತನಾಡಿ, ಗೋಣಿಕೊಪ್ಪಲು ದಸರಾ ಕವಿ ಗೋಷ್ಠಿಗೆ ಆಹ್ವಾನಿಸಿದಾಗ ಇಷ್ಟು ಬಾರಿಗಿಂತಲೂ ಹೆಚ್ಚು ಕವನಗಳನ್ನು ಕವಿಗಳು ಕಳುಹಿಸಿ ಕೊಟ್ಟಿರುತ್ತಾರೆ. ಈ ಬಾರಿ 130 ಕವನಗಳು ಅಂಚೆ, ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಬಂದಿದ್ದು, ಆಯ್ಕೆ ಸಮಿತಿಯು 80 ಕವಿಗಳ ಕವಿತೆಗಳನ್ನು, ನಾಲ್ಕು ಚುಟುಕು ಕವನಗಳನ್ನು ಆರಿಸಲಾಗಿದೆ. ಮಕ್ಕಳ ಕವಿಗೋಷ್ಠಿಯನ್ನು ಆಯೋಜಿಸಿದ್ದು ಕನ್ನಡದಲ್ಲಿ 6 ಮತ್ತು ಇಂಗ್ಲಿಷ್ ನಲ್ಲಿ 5 ಕವನಗಳು ಬಂದಿರುತ್ತವೆ. ಕನ್ನಡ ಭಾಷೆಯ 40 ಕವನಗಳು ಬಂದಿದ್ದು ಕನ್ನಡ ಉಪಭಾಷೆಗಳಾದ ಕೊಡವ ಭಾಷೆಯ 10 ಕವನಗಳು,ಅರೆ ಭಾಷೆಯ 5 ಕವನಗಳು, ಎರವ ಭಾಷೆಯ 5 ಕವನಗಳು, ತುಳು ಭಾಷೆಯ 4 ಕವನಗಳು, ಕುಂಬಾರ ಭಾಷೆಯ 2 ಕವನಗಳು, ಕೊಂಕಣಿ ಭಾಷೆಯ 1 ಕವನ, ಬ್ಯಾರಿ ಭಾಷೆಯ 1ಕವನ ಅಲ್ಲದೆ ಹಿಂದಿ ಭಾಷೆಯ 3 ಕವನಗಳು, ಮರಾಠಿ ಭಾಷೆಯ 2 ಕವನಗಳು ತಮಿಳು ಭಾಷೆಯ 2 ಕವನಗಳು ಮತ್ತು ಮಲಯಾಳಂ ಭಾಷೆಯ 2 ಕವನಗಳು ಹಾಗೂ ಇಂಗ್ಲಿಷ್ ಭಾಷೆಯ 1 ಕವನಗಳ ವಾಚನವನ್ನು ಕವಿಗಳು ಮಾಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೀಲಾ ಬೋಪಣ್ಣ, ಸಹಕಾರ್ಯದರ್ಶಿ ಟಿ.ಆರ್.ವಿನೋದ್, ನಿರ್ದೇಶಕರುಗಳಾದ ಚಂದನಾ ಮಂಜುನಾಥ್, ಚಂದನ್ ಕಾಮತ್, ಮಹೇಶ್, ಓಮನ, ಮಹಿಳಾ ದಸರಾ ಸಮಿತಿಯ ಅಧ್ಯಕ್ಷೆ ಮಂಜುಳಾ ಉಪಸ್ಥಿತರಿದ್ದರು.