ಕುಶಾಲನಗರ ಅ.2 NEWS DESK : ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾ.ಪಂ ಸಹಯೋಗದೊಂದಿಗೆ
ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಅ.2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 155 ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ( ಎಸ್.ಎಸ್.ಎಸ್.) ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಘಟಕದ ವತಿಯಿಂದ ಸ್ವಚ್ಛ ಭಾರತ್ ಮಿಷನ್ ಧ್ಯೇಯವಾದ ‘ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ” 2024 ರ ಅಂಗವಾಗಿ ಕೂಡ್ಲೂರು ಗ್ರಾಮದಲ್ಲಿ ಸ್ವಚ್ಛತೆಯೇ ಸೇವೆ : “ಸ್ವಚ್ಛತಾ ಹೀ ಆಂದೋಲನ ನಡೆಸಲಾಯಿತು. ಸ್ವಭಾವ ಸ್ವಚ್ಛತೆ – ಸಂಸ್ಕಾರ ಸ್ವಚ್ಚತೆ”: ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಮತ್ತು ಒಳ್ಳೆಯ ಸ್ವಭಾವ ಹೊಂದಿರಬೇಕು. ಆಗ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ. ವಿದ್ಯಾರ್ಥಿಗಳು ತಮ್ಮನ್ನು ಪರಿಸರ ರಾಯಭಾರಿಗಳಾಗಿ ರೂಪಿಸಿಕೊಳ್ಳಬೇಕು ಎಂದರು. “ಸ್ವಭಾವ ಸ್ವಚ್ಛತೆ,ಸಂಸ್ಕಾರ ಸ್ವಚ್ಛತೆ” ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಈ ಅಭಿಯಾನವನ್ನು ಸೆ.17 ರಿಂದ ಅ.2 ವರೆಗೆ ನಡೆದ ಸ್ವಚ್ಚತಾ ಪಕ್ವಾಡ್ ಅಭಿಯಾನವು ಜನರಲ್ಲಿ ಸ್ವಚ್ಛತೆಯೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿದೆ ಎಂದರು. ಜಾಥಾದಲ್ಲಿ ಸ್ವಚ್ಚತೆಯ ಮಹತ್ವ ಕುರಿತು ಮಾಹಿತಿ ನೀಡಿದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ.ಸೌಮ್ಯ, ವಿದ್ಯಾರ್ಥಿಗಳು ಪರಿಸರ ಸ್ವಚ್ಚತೆಗೆ ಜತೆಗೆ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು. ವಿದ್ಯಾರ್ಥಿನಿ ಕೆ.ಎಂ.ಮಮತ ಮಾತನಾಡಿ, ವಿದ್ಯಾರ್ಥಿಗಳಾದ ನಾವು ಪರಿಸರ ಸ್ವಚ್ಚತೆಗೆ ಸಂಕಲ್ಪ ತೊಡಬೇಕು ಎಂದರು. “ಗಾಂಧಿ ನಡಿಗೆ – ಸ್ವಚ್ಚತಾ ನಡಿಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ಗ್ರಾಮದಲ್ಲಿ ನಡೆಸಿದ ಪರಿಸರ ಸ್ವಚ್ಛತಾ ಜಾಗೃತಿ ಅಭಿಯಾನದಲ್ಲಿ ಭಾಗವಹಿಸದ್ದ ವಿದ್ಯಾರ್ಥಿಗಳು ಸ್ವಚ್ಚತಾ ಹೀ ಸೇವಾ ಅಭಿಯಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಜಾಥಾದಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆ, ಪರಿಸರ, ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಪರಿಸರ ಘೋಷಣೆಗಳನ್ನು ಕೂಗಿದರು. ಇದಕ್ಕೂ ಮೊದಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜತೆಗೂಡಿ ಶಾಲಾವರಣದಲ್ಲಿ ಶ್ರಮದಾನ ನಡೆಸಿದರು.