ಮಡಿಕೇರಿ ಅ.3 NEWS DESK : ಮಡಿಕೇರಿ ಕರಗ ಉತ್ಸವದೊಂದಿಗೆ ದಸರಾಗೆ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಅ.4 ರಿಂದ 12 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆಯಲಿವೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಮಡಿಕೇರಿ ದಸರಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ವತಿಯಿಂದ ವಿವಿಧ ದಸರಾ ಕಾರ್ಯಕ್ರಮಗಳು ಜರುಗಲಿದೆ ಎಂದರು. ಅ.4 ರಂದು ಸಂಜೆ 6 ಗಂಟೆಗೆ ರಸಮಂಜರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.5 ರಂದು ಬೆಳಗ್ಗೆ 9 ಗಂಟೆಗೆ ‘ಮಕ್ಕಳ ದಸರಾ’ ನಡೆಯಲಿದೆ. ಜೊತೆಗೆ ಸಂಜೆ 6 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅ.6 ರಂದು ಬೆಳಗ್ಗೆ 10 ಗಂಟೆಗೆ ‘ಕಾಫಿ ದಸರಾ’ ನಡೆಯಲಿದ್ದು, ಕೃಷಿ ಸಂಬಂಧಿಸಿದ ಉಪಯುಕ್ತ ಮಾಹಿತಿ ಉಳ್ಳ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಂಜೆ 6 ಗಂಟೆಗೆ ಹೆಸರಾಂತ ಕಲಾವಿದರಿಂದ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು. ಅ.7 ರಂದು ಸ್ಟಾರ್ ಸಿಂಗರ್ ಪ್ರಶಸ್ತಿ ವಿಜೇತ ಅವಿರ್ಭವ್ ಅವರಿಂದ ಗಾನಸುಧೆ ನಡೆಯಲಿದೆ. ಅಕ್ಟೋಬರ್, 08 ರಂದು ಬೆಳಗ್ಗೆ 10 ಗಂಟೆಗೆ ‘ಮಹಿಳಾ ದಸರಾ’ ನಡೆಯಲಿದೆ ಎಂದು ಅವರು ತಿಳಿಸಿದರು. ಅ.9 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.10 ರಂದು ಬೆಳಗ್ಗೆ 10 ಗಂಟೆಗೆ ಕೊಡಗು ಜಿಲ್ಲಾ ಜಾನಪದ ಪರಿಷತ್ತು ಸಹಯೋಗದಲ್ಲಿ ‘ಜಾನಪದ ದಸರಾ’ ನಡೆಯಲಿದೆ. ಹಾಗೆಯೇ ಸಂಜೆ 6 ಗಂಟೆಗೆ ‘ಯುವದಸರಾ’ ನಡೆಯಲಿದ್ದು, ಯುವ ದಸರಾಗೆ ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರು ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು. ಅ.11 ರ ಆಯುಧ ಪೂಜಾದಂದು ಸಂಜೆ 6 ಗಂಟೆಗೆ ನಾಡಿನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಹಿನ್ನೆಲೆ ಗಾಯಕ ರಾಜೇಶ್ ಕಷ್ಣನ್ ಮತ್ತು ತಂಡದವರಿಂದ ಸಂಗೀತ ರಸಮಂಜರಿ ನಡೆಯಲಿದೆ. ಅ.11 ಅಥವಾ 12 ರಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಕನ್ನಡ ಮತ್ತು ಸಂಸ್ಕøತಿ ಸಚಿವರಾದ ಶಿವರಾಜ್ ತಂಗಡಗಿ ಅವರು ಆಗಮಿಸುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ದಸರಾ ಆಚರಣೆಗೆ ಎಲ್ಲರ ಸಹಕಾರ ಅತ್ಯಗತ್ಯ. ಆ ನಿಟ್ಟಿನಲ್ಲಿ ಯಾರೂ ಸಹ ಪ್ಲಾಸ್ಟಿಕ್ ಬಳಸದಂತೆ ಗಮನಹರಿಸಬೇಕು. ತ್ಯಾಜ್ಯವನ್ನು ಡಸ್ಟ್‍ಬಿನ್‍ನಲ್ಲಿ ಕಡ್ಡಾಯವಾಗಿ ಇಡಬೇಕು. ಪರಿಸರವನ್ನು ಕಾಪಾಡಬೇಕು ಎಂದರು. ಅಗತ್ಯವಿರುವ ಕಡೆ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಲಾಗುವುದು. ಒಟ್ಟಾರೆ ಪರಿಸರ ಸ್ನೇಹಿ ದಸರಾ ಆಚರಿಸಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಕೋರಿದರು.