ಮಡಿಕೇರಿ NEWS DESK ಅ.3 : ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವದ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಸಂಭ್ರಮ ಇಂದು ಆರಂಭಗೊ0ಡಿತು. ಇತಿಹಾಸ ಪ್ರಸಿದ್ಧ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ನಗರದ ಪಂಪಿನ ಕೆರೆಯ ಬನ್ನಿ ಮಂಟಪದಲ್ಲಿ ಸಾಂಪ್ರದಾಯಿಕವಾಗಿ ವಿಶೇಷ ಪೂಜೆಯನ್ನು ಸಲ್ಲಿಸಿ ಕರಗೋತ್ಸವದ ನಗರ ಸಂಚಾರಕ್ಕೆ ಚಾಲನೆ ನೀಡಲಾಯಿತು. ಹಾಲೇರಿ ರಾಜವಂಶಸ್ಥರ ಆಳ್ವಿಕೆಯ ಕಾಲದಿಂದ ನಡೆದುಕೊಂಡು ಬಂದಿರುವ ಮಡಿಕೇರಿಯ ದಸರಾ ಉತ್ಸವಕ್ಕೆ ಒಂದೂವರೆ ಶತಮಾನದ ಭವ್ಯ ಇತಿಹಾಸವಿದೆ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ದಸರಾ ಉತ್ಸವದಲ್ಲಿ ಅಗ್ರ ಸ್ಥಾನವನ್ನು ನೀಡಲಾಗಿದೆ. ನವರಾತ್ರಿಯ ವಿಶೇಷವಾಗಿ ಕರಗಗಳ ನಗರ ಪ್ರದಕ್ಷಿಣೆ ನಡೆಯಲಿದೆ.ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ನಗರದ ರಾಜಾಸೀಟು ಬಳಿಯ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಕರಗವನ್ನು ಪಿ.ಪಿ.ಚಾಮಿ, ಗೌಳಿಬೀದಿಯ ಶ್ರೀಕಂಚಿಕಾಮಾಕ್ಷಿಯಮ್ಮ ದೇವಾಲಯದ ಕರಗವನ್ನು ಪಿ.ಸಿ.ಉಮೇಶ್, ಶ್ರೀದಂಡಿನ ಮಾರಿಯಮ್ಮ ದೇವಾಲಯದ ಕರಗವನ್ನು ಜಿ.ಎ.ಉಮೇಶ್ ಹಾಗೂ ಶ್ರೀಕೋಟೆ ಮಾರಿಯಮ್ಮ ದೇವಾಲಯದ ಕರಗವನ್ನು ಪಿ.ಬಿ.ಅನೀಶ್ ಕುಮಾರ್ ಹೊರುವ ಮೂಲಕ ನಗರ ಪ್ರದಕ್ಷಿಣೆಯನ್ನು ಆರಂಭಿಸಿದರು. ನವರಾತ್ರಿ ಉತ್ಸವದ ಆರಂಭದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ನಾಲ್ಕು ಶಕ್ತಿದೇವತೆಗಳ ದೇವಸ್ಥಾನಗಳಿಂದ ವ್ರತಧಾರಿಗಳೊಂದಿಗೆ ದೇವಾಲಯ ಸಮಿತಿಯವರು ಕರಗ ನಿರ್ಮಾಣಕ್ಕೆ ಅಗತ್ಯವಾದ ಸಾಮಾಗ್ರಿಗಳನ್ನು ಹೊತ್ತು ಬನ್ನಿ ಮಂಟಪಕ್ಕೆ ತೆರಳಿ ಪೂಜಾ ವಿಧಿ-ವಿಧಾನಗಳೊಂದಿಗೆ ಅತ್ಯಾಕರ್ಷಕವಾಗಿ ಕರಗಗಳನ್ನು ಕಟ್ಟಿ ಹೂವುಗಳಿಂದ ಅಲಂಕರಿಸಿ ಸಂಜೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ಕರಗೋತ್ಸವ ಆರಂಭದ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿಗಳು ಹಾಗೂ ಮಡಿಕೇರಿ ದಸರಾ ಸಮಿತಿಯ ಅಧ್ಯಕ್ಷರಾದ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯ್ತಿ ಸಿಇಒ ವರ್ಣಿತ್ ನೇಗಿ, ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ, ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಖಜಾಂಚಿ ಅರುಣ್ ಶೆಟ್ಟಿ, ದಶ ಮಂಟಪ ಸಮಿತಿ ಅಧ್ಯಕ್ಷರಾದ ಜಗದೀಶ್, ದಸರಾ ಸಮಿತಿಯ ಉಪ ಸಮಿತಿಗಳ ಪದಾಧಿಕಾರಿಗಳು ಹಾಜರಿದ್ದರು. ಪಂಪಿನಕೆರೆ ಬಳಿಯಿಂದ ಹೊರಟ ನಾಲ್ಕು ಕರಗಗಳು ಮಹದೇವಪೇಟೆಯ ಶ್ರೀಚೌಡೇಶ್ವರಿ ದೇವಾಲಯ, ಶ್ರೀಕನ್ನಿಕಾ ಪರಮೇಶ್ವರಿ ದೇಗುಲ ಹಾಗೂ ಸಂಪ್ರದಾಯದ0ತೆ ಪೇಟೆ ಶ್ರೀರಾಮಮಂದಿರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತ್ತು ಸ್ವೀಕರಿಸಿ ತಮ್ಮ ತಮ್ಮ ದೇವಾಲಯಗಳಿಗೆ ತೆರಳಿದವು.