ಸಿದ್ದಾಪುರ ಅ.7 NEWS DESK : ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಿದ್ದಾಪುರದಲ್ಲಿ 31ನೇ ವರ್ಷದ ಆಯುಧ ಪೂಜೆಯನ್ನು ಈ ಬಾರಿ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಲು ನಿರ್ಧರಿಸಲಾಗಿದ್ದು, ಸಿದ್ದತೆ ನಡೆಯುತ್ತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸೂದನ ಸತೀಶ್ ತಿಳಿಸಿದರು. ನಗರದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.11 ರಂದು ಸಿದ್ದಾಪುರ ಬಸ್ ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಮಕ್ಕಳ ಸೈಕಲ್ ನಿಧಾನ ಸ್ಪರ್ಧೆ, 16ವರ್ಷ ಮೇಲ್ಪಟ್ಟವರಿಗೆ ಯುವಕರಿಗೆ ರಸ್ತೆ ಓಟ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಆಯುಧ ಪೂಜೆ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಮಾತನಾಡಿ. ಸಾಂಸ್ಕೃತಿಕ ಕಾರ್ಯಕ್ರಮವು ನಾಲ್ಕು ವಿಭಾಗಗಳಲ್ಲಿ ನಡೆಯುತ್ತಿದ್ದು, ಒಂದರಿಂದ ಏಳನೇ ತರಗತಿವರೆಗೆ ಭರತನಾಟ್ಯ, ಜಾನಪದ ನೃತ್ಯ ,ಸಾಮೂಹಿಕ ನೃತ್ಯ, ಪ್ರೌಢಶಾಲಾ ವಿಭಾಗದಲ್ಲಿ ಭರತನಾಟ್ಯ, ಜಾನಪದ ನೃತ್ಯ, ಸಾಮೂಹಿಕ ನೃತ್ಯ, ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಸಾಮೂಹಿಕ ನೃತ್ಯ, ಜಾನಪದ ನೃತ್ಯ , ನೃತ್ಯಶಾಲಾ ವಿಭಾಗದಲ್ಲಿ ಸಾಮೂಹಿಕ ನೃತ್ಯ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಸ್ದೂರ್ ಸಂಘದ ಕಾರ್ಯದರ್ಶಿ ಅನೀಶ್ ಮಾತನಾಡಿ, ಸಂಘ ಸಂಸ್ಥೆಗಳ ನೃತ್ಯ ಪಟುಗಳಿಗೆ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು ಸ್ಪರ್ಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು. ಸಂಜೆ 6ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಭಾರತೀಯ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಸೂದನ ಸತೀಶ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ಪ್ರೇಮಾ ಗೋಪಾಲ್, ಉಪಾಧ್ಯಕ್ಷ ಪಳನಿಸ್ವಾಮಿ, ಸಂಘದ ಕಾನೂನು ಸಲಹೆಗಾರ ರತ್ನಾಕರ ಶೆಟ್ಟಿ, ಗುಹ್ಯ ಅಗಸ್ತೇಶ್ವರ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ವೆಂಕಟೇಶ್, ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ ಅಧ್ಯಕ್ಷ ವಿ.ಕೆ.ಲೋಕೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಸ್. ಸುನೀಲ್, ಪ್ರಮುಖರಾದ ವೆಂಕಪ್ಪರೈ, ಚುಮ್ಮಿಪೂವಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಸಾಧಕರಿಗೆ ಸನ್ಮಾನ ಹಾಗೂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದರು. ರಾತ್ರಿ ವಿ.ಪಿ.ಮೆಲೋಡಿಯಸ್ ಮಂಗಳೂರು ಇವರಿಂದ ಸಂಗೀತ ರಸ ಸಂಜೆ ಆಯೋಜನೆ ಮಾಡಿರುವುದಾಗಿಯೂ ತಿಳಿಸಿದರು. ಗೋಷ್ಠಿಯಲ್ಲಿ ಆಚರಣಾ ಸಮಿತಿ ಕಾರ್ಯದರ್ಶಿ ವಿನೋದ್ ಖಜಾಂಚಿ ಶರವಣ, ಸಂಘದ ಉಪಾಧ್ಯಕ್ಷ ಎಂ .ಹೆಚ್. ರತೀಶ್, ಸದಸ್ಯರಾದ ದಾಸನ್ ಪಿ.ಕೆ.ರವಿ,ಸುರೇಶ್ ದೇವರಕಾಡು, ಶಶಿ ಹಾಜರಿದ್ದರು.