ಮಡಿಕೇರಿ ಅ.8 NEWS DESK : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ.ಡಾ.ಶ್ರೀಧರ ಹೆಗಡೆ ಅವರಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಹಿಂದಿ ಅನುವಾದ ಪುರಸ್ಕಾರ ಲಭಿಸಿದೆ. ರಾಜ್ಯ ಮಟ್ಟದ ಈ ಪುರಸ್ಕಾರವನ್ನು ಬೆಂಗಳೂರು ವಿಶ್ವ ವಿದ್ಯಾಲಯದ ಹಿಂದಿ ವಿಭಾಗ ನೀಡಿ ಗೌರವಿಸಿದೆ. ಪ್ರೊ.ಡಾ.ಶ್ರೀಧರ ಹೆಗಡೆ ಅವರು ಕುವೆಂಪು ಅವರ ನಾಟಕ “ಬಲಿದಾನ” ವನ್ನು ಹಿಂದಿ ಭಾಷೆಗೆ ಅನುವಾದ ಮಾಡಿದ್ದಾರೆ. ಈ ಕೃತಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಹಿಂದಿ ಅನುವಾದ ಪುರಸ್ಕಾರ ಸಿಕ್ಕಿರುವುದರಿಂದ ಕನ್ನಡ ಮತ್ತು ಹಿಂದಿ ಭಾಷೆ ಬಾಂಧವ್ಯವೂ ಹೆಚ್ಚಿದಂತ್ತಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತರಾದ ಡಾ.ಶ್ರೀಧರ ಹೆಗಡೆ ಅವರು 22 ಕ್ಕಿಂತ ಹೆಚ್ಚು ಕೃತಿಗಳನ್ನು ಕನ್ನಡದಲ್ಲಿ ಮತ್ತು 15 ಕ್ಕಿಂತ ಹೆಚ್ಚು ಕೃತಿಗಳನ್ನು ಹಿಂದಿ ಭಾಷೆಯಲ್ಲಿ ರಚಿಸಿದ್ದಾರೆ. ಅಲ್ಲದೆ ಕನ್ನಡದಿಂದ ಹಿಂದಿ ಭಾಷೆಗೆ 10ಕ್ಕಿಂತ ಅಧಿಕ ಹಾಗೂ ಹಿಂದಿಯಿಂದ ಕನ್ನಡಕ್ಕೆ 5 ಕ್ಕಿಂತ ಹೆಚ್ಚು ಕೃತಿಗಳನ್ನು ಅನುವಾದಿಸಿ ಕನ್ನಡ ಮತ್ತು ಹಿಂದಿ ಸಾಹಿತ್ಯದ ಪರಿಚಯ ಮಾಡಿ ಸಾಹಿತ್ಯ ಕ್ಷೇತ್ರದ ಪ್ರಶಂಸೆಗೆ ಪಾತ್ರರಾಗಿದ್ದಾರೆ.