ಮಡಿಕೇರಿ ಅ.21 NEWS DESK : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪತ್ರಕರ್ತರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆದರ್ಶ್ ಅದ್ಕಲೇಗಾರ್, ಶಶಿಕುಮಾರ್ ರೈ ಚಾಂಪಿಯನ್ ಪಟ್ಟ ಅಲಂಕರಿಸಿದರು. ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಆದರ್ಶ್ ಅದ್ಕಲೇಗಾರ್ ನವೀನ್ ಡಿಸೋಜಾರನ್ನು 2-1 ಸೆಟ್‍ಗಳಿಂದ ಮಣಿಸಿದರು. ಆದರ್ಶ್ ಅದ್ಕಲೇಗಾರ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ನವೀನ್ ಡಿಸೋಜ ದ್ವಿತೀಯ ಸ್ಥಾನ ಪಡೆದರು. ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ವಿನೋದ್ ಅವರನ್ನು ರಿಜ್ವಾನ್ ಹುಸೇನ್ ಮಣಿಸಿ ತೃತೀಯ ಸ್ಥಾನ ಪಡೆದರು. ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಆದರ್ಶ್ ಅದ್ಕಲೇಗಾರ್ ಮತ್ತು ಶಶಿಕುಮಾರ್ ರೈ ಜೋಡಿ ಇಸ್ಮಾಯಿಲ್ ಕಂಡಕೆರೆ ಮತ್ತು ಹೆಚ್.ಜೆ.ರಾಕೇಶ್ ಜೋಡಿಯನ್ನು ನೇರ ಸೆಟ್‍ಗಳಿಂದ ಮಣಿಸಿ ಪ್ರಥಮ ಸ್ಥಾನ ಪಡೆದರು. ಇಸ್ಮಾಯಿಲ್ ಕಂಡಕೆರೆ ಮತ್ತು ಹೆಚ್.ಜೆ.ರಾಕೇಶ್ ಜೋಡಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ನವೀನ್ ಡಿಸೋಜ ಮತ್ತು ಸವಿತಾ ರೈ ಜೋಡಿ, ರಿಜ್ವಾನ್ ಹುಸೈನ್ ಮತ್ತು ಸಂತೋಷ್ ರೈ ಜೋಡಿಯನ್ನು ನೇರ ಸೆಟ್‍ಗಳಿಂದ ಮಣಿಸಿ ತೃತೀಯ ಸ್ಥಾನ ಪಡೆದರು. ಪಂದ್ಯಾಟದ ಸಿಂಗಲ್ಸ್ ವಿಭಾಗದಲ್ಲಿ 16 ಆಟಗಾರರು ಪಾಲ್ಗೊಂಡಿದ್ದರೆ, ಡಬಲ್ಸ್ ವಿಭಾಗದಲ್ಲಿ 8 ತಂಡಗಳು ಲೀಗ್ ಮಾದರಿಯಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಿತು.
ಉದ್ಘಾಟನಾ ಸಮಾರಂಭ :: ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರೆಸ್ ಕ್ಲಬ್ ಹೆಚ್ಚಿನ ಪಾತ್ರ ವಹಿಸಲಿ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಆಧಾರ ಸ್ತಂಬವಾದ ಪತ್ರಕರ್ತರು, ಜಂಜಾಟದ ನಡುವೆ ಕ್ರೀಡೆಯಲ್ಲಿ ತೊಡಗುವುದರಿಂದ ದೈಹಿಕ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ. ಪತ್ರಕರ್ತರಲ್ಲಿ ಒಗ್ಗಟ್ಟಿರಬೇಕು. ಜತೆಗೆ ಒಟ್ಟಾಗಿ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು ಎಂದರು. ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಇದು ನೂತನ ಆಡಳಿತ ಮಂಡಳಿಯ ಮೂರನೇ ಕಾರ್ಯಕ್ರಮವಾಗಿದೆ. ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಚಿತವಾಗಿ ಮೈದಾನ ಒದಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಂಘ ಮತ್ತು ಕ್ಲಬ್‍ನ ಎಲ್ಲಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ಸವಿತಾ ರೈ ಮಾತನಾಡಿ, ದೃಢ ಸಂಕಲ್ಪ ಮತ್ತು ಇಚ್ಛಾ ಶಕ್ತಿಯಿದ್ದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ನಾವು ಬದಲಾವಣೆಯಾಗದ ಹೊರತು ಮತ್ತೊಬ್ಬರನ್ನು ಬದಲಾಯಿಸಲು ಸಾಧ್ಯವಿಲ್ಲ. ಆಟದಲ್ಲಿ ಪಾಲ್ಗೊಳ್ಳದಿದ್ದರೂ ಕ್ರೀಡಾ ಸ್ಪೂರ್ತಿ, ಪ್ರೋತ್ಸಾಹ ತುಂಬುವ ನಿಟ್ಟಿನಲ್ಲಿ ಪತ್ರಕರ್ತರೆಲ್ಲರೂ ಪಾಲ್ಗೊಳ್ಳುವುದು ಮುಖ್ಯವಾಗುತ್ತದೆ. ಅಯ್ಯಪ್ಪ ಅವರು ತಮ್ಮ ವಿಭಿನ್ನ ಕನಸುಗಳನ್ನು ಸಾಕಾರ ಮಾಡುವಲ್ಲಿ ಹೆಜ್ಜೆ ಇಟ್ಟಿದ್ದಾರೆ ಎಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಆನಂದ್ ಕೊಡಗು ಮಾತನಾಡಿ, ಕ್ಲಬ್ ಹಾಗೂ ಸಂಘದ ಸದಸ್ಯರು ಸಕ್ರಿಯವಾಗಿ ಪಾಳ್ಗೊಳ್ಳದಿರುವುದು ಬೇಸರದ ವಿಚಾರ. ಆಟಗಾರರಿದ್ದಾರೆ, ಆದರೆ, ವೀಕ್ಷಕರಿಲ್ಲ. ಕರ್ತವ್ಯದ ನಡುವೆಯೂ ಸಮಯ ಮಾಡಿಕೊಂಡು ಪಾಲ್ಗೊಳ್ಳುವಂತಾಗಬೇಕು ಎಂದರು. ಅಂತರರಾಷ್ಟ್ರೀಯ ಹಿರಿಯ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ, ಪ್ರೆಸ್ ಕ್ಲಬ್ ನಿದೇರ್ಶಕ ಮಂಜು ಸುವರ್ಣ, ಪ್ರೆಸ್ ಕ್ಲಬ್ ಪ್ರದಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್ ಇತರರು ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಹೊದ್ದೂರು ಗ್ರಾ.ಪಂ ಅಧ್ಯಕ್ಷ ಎಚ್.ಎ. ಹಂಸ, ಕ್ರೀಡಾ ಜಿಲ್ಲೆಯಾಗಿರುವ ಕೊಡಗಿನಲ್ಲಿ ಕ್ರೀಡಾಂಗಣದ ಉನ್ನತೀಕರಣದ ಅವಶ್ಯಕತೆ ಇದೆ. ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಕೆಲವೊಂದು ಸಮಸ್ಯೆಗಳಿದ್ದು, ಈ ಕುರಿತು ಶಾಸಕ ಡಾ.ಮಂತರಗೌಡ ಅವರ ಗಮನ ಸೆಳೆದು ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸದಾ ಒತ್ತಡದಲ್ಲಿರುವ ಪತ್ರಕರ್ತರ ಮನೋಲ್ಲಾಸಕ್ಕೆ ಈ ರೀತಿಯ ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ಹೇಳಿದರು. ಉದ್ಯಮಿ ಮಾರ್ಟಿನ್ ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದು ಸಂತೋಷ ತಂದಿದೆ. ಇಂತಹ ಕಾರ್ಯಕ್ರಮಗಳಿಂದ ಪರಸ್ಪರ ಪರಿಚಯವಾಗುತ್ತದೆ ಎಂದರು. ಅಂತರರಾಷ್ಟ್ರೀಯ ಹಿರಿಯ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಮಾತನಾಡಿ, ಪುರುಷರ ಮದ್ಯ ಮಹಿಳೆಯರು ಪಾಲ್ಗೊಂಡಿದ್ದು ಖುಷಿಕೊಟ್ಟಿದೆ. ಯಾವುದೇ ಕ್ರೀಡೆಯಾಗಲಿ ಮೊದಲು ಅಭ್ಯಾಸ ಮುಖ್ಯ. ಮುಂದಿನ ದಿನಗಳಲ್ಲಿ ಆಯೋಜಿಸುವ ಕ್ರೀಡಾಕೂಟಕ್ಕೆ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸವಿತಾ ರೈ ಮಾತನಾಡಿ, ಪತ್ರಿಕೋದ್ಯಮ ಎನ್ನುವುದೇ ಒಂದು ಒತ್ತಡದ ಬದುಕಾಗಿದೆ. ಇದನ್ನು ಬದಿಗಿಟ್ಟು ಪಾಲ್ಗೊಂಡಿರುವುದು ಸಂತೋಷ ತಂದಿದೆ. ಶಿಕ್ಷಣಕ್ಕೆ ಪೆÇ್ರೀತ್ಸಾಹ ನೀಡುವ ಮಾರ್ಟಿನ್ ಅವರ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿಯೂ ಮುಂದುವರೆಯಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆದಿದೆ. ಜ್ಯೋತಿ ಸೋಮಯ್ಯರವರು ಕ್ರೀಡಾಕೂಟವನ್ನು ಉತ್ತಮವಾಗಿ ನಡೆಸಿಕೊಟ್ಟಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಂಡು ಸಹಕರಿಸಬೇಕು ಎಂದರು. ವೇದಿಕೆಯಲ್ಲಿ ಪ್ರೆಸ್ ಕ್ಲಬ್ ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ, ಸಮಾಜ ಸೇವಕಿ ಮಮತ ಚಂದ್ರಶೇಖರ್, ಇತರರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಪ್ರೆಸ್ ಕ್ಲಬ್ ಸದಸ್ಯ ಎಚ್.ಜೆ.ರಾಕೇಶ್ ಸ್ವಾಗತಿಸಿದರೆ, ಕ್ಲಬ್ ನಿದೇರ್ಶಕ ಇಸ್ಮಾಯಿಲ್ ಕಂಡಕರೆ ನಿರೂಪಿಸಿ, ಪ್ರಜ್ವಲ್ ವಂದಿಸಿದರು. ಅಂತರರಾಷ್ಟ್ರೀಯ ಹಿರಿಯ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಅವರ ಬಳಿ ತರಬೇತಿ ಪಡೆಯುತ್ತಿರುವ ನಿಲಿಶಾ ಜೊಜೊ, ದ್ರುವ ಪಲ್ಲಡ್, ರಿಶೀಲ್, ಮದು, ತಷ್ಮ ಮುತ್ತಮ್ಮ, ಅದಿತ್ರಿ, ಅಥರ್ವ್ ತೀರ್ಪುಗಾರರಾಗಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಹಿರಿಯ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು.