ಮಡಿಕೇರಿ ಅ.21 NEWS DESK : ಕೊಡವ ಮಕ್ಕಡ ಕೂಟದ 99ನೇ ಪುಸ್ತಕ ಲೇಖಕಿ ತೆನ್ನೀರ ಟೀನಾ ಚಂಗಪ್ಪ ರಚಿಸಿರುವ “ಮಣ್ಣ್‌ರ ಋಣ” ಕೊಡವ ಪುಸ್ತಕ ಅ.26 ರಂದು ಲೋಕಾರ್ಪಣೆಗೊಳ್ಳಲಿದೆ. ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಡಾ.ಬೊಜ್ಜಂಗಡ ಅವನಿಜ ಸೋಮಯ್ಯ ಉದ್ಘಾಟಿಸಲಿದ್ದು, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ ತೆನ್ನೀರ ಡಾಟಿ ಗಣೇಶ್, ಸಮಾಜ ಸೇವಕರಾದ ಕುಳುವಂಡ ಮಣಿ ಜೋಯಪ್ಪ, “ಮಣ್ಣ್‌ರ ಋಣ” ಪುಸ್ತಕದ ಲೇಖಕಿ ತೆನ್ನೀರ ಟೀನಾ ಚಂಗಪ್ಪ ಪಾಲ್ಗೊಳ್ಳಲಿದ್ದಾರೆ. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ನೇತೃತ್ವದಲ್ಲಿ ಇಲ್ಲಿಯರೆಗೆ ಜಿಲ್ಲೆಯ ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಹಲವು ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಕೊಡವ ಮಕ್ಕಡ ಕೂಟದ 98ನೇ ಪುಸ್ತಕ “ಗುಳೆ” ಸೆ.24 ರಂದು ಲೋಕಾರ್ಪಣೆಗೊಳ್ಳುತ್ತಿದೆ. ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ಪುಸ್ತಕಗಳಲ್ಲಿ ನಾಲ್ಕು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕ ರಾಜ್ಯ ಪ್ರಶಸ್ತಿ ಪಡೆದಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಮಹತ್ವಾಕಾಂಕ್ಷೆಯ 100ನೇ ಪುಸ್ತಕ ಸಿದ್ಧಗೊಳ್ಳುತ್ತಿದ್ದು, ನವೆಂಬರ್ ತಿಂಗಳಿನಲ್ಲಿ ಅದ್ದೂರಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಸಮರ್ಪಿಸಲಾಗುವುದು ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದ್ದಾರೆ.