ಮಡಿಕೇರಿ ಅ.21 NEWS DESK : ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಸಂಘದ ಪದಗ್ರಹಣ ಸಮಾರಂಭವು ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ತಪೋವನ ಗುರುಮಂದಿರದ ಸಭಾಂಗಣದಲ್ಲಿ ನಡೆಯಿತು. ಕುಶಾಲನಗರ ಸಂತ ಸಬಾಸ್ಟಿನ್ ದೇವಾಲಯದ ವಂದನೀಯ ಗುರು ಎಂ.ಮಾರ್ಟಿನ್ ಆಶೀರ್ವಚನ ನೀಡಿ, ಸಮಾಜದಲ್ಲಿ ಸಂಘ-ಸಂಸ್ಥೆಗಳು ಬೇಕು. ಆದರೆ ಅದರಿಂದ ಸಮಾಜದಲ್ಲಿ ಕಡು ಬಡವರಿಗೆ ಸಹಾಯ ಮಾಡುವುದು ಮತ್ತು ಇತರರೊಡನೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕೆಂದರು. ಗುರು ಗಿಲ್ಬರ್ಟ್ ಡಿಸಿಲ್ವ ಮಾತನಾಡಿ, ಪ್ರೀತಿಯಿಂದ ಎಲ್ಲರೊಡನೆ ಬೆರೆತು ಬಾಳಬೇಕೆಂದು ಕರೆ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‍ನ ನಿಕಟ ಪೂರ್ವ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ ನೂತನ ಅಧ್ಯಕ್ಷ ಜಾನ್ಸನ್ ಪಿಂಟೋ ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾ ತಮ್ಮಂತೆ ಇತರರನ್ನು ಕಾಣಬೇಕೆಂದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಜಾನ್ಸನ್ ಪಿಂಟೋ, ಪ್ರಮಾಣಿಕತೆಯಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಬಡವರ ಮತ್ತು ಸಾರ್ವಜನಿಕರ ಒಳಿತಿಗಾಗಿ ಕೈ ಜೋಡಿಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಂದನೀಯ ಗುರು ಪೀಟರ್ ಡೇಸಾ, ತಪೋವನ ಗುರುಮಂದಿರ ವಂದನೀಯ ಗುರು ಚಾಲ್ಸ ನರೋನ, ಧರ್ಮಗುರುಗಳು, ಸಮಾಜ ಸೇವಕ, ಪ್ರಗತಿಪರ ಕೃಷಿಕ ಜೆರೋಮ್ ಡಿಸೋಜ, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿ.ಎಸ್.ಸಜಿ, ಜಿಲ್ಲೆಯ ಎಲ್ಲಾ ಚರ್ಚ್‍ಗಳಿಂದ ಸದಸ್ಯರು ಮತ್ತು ಮಹಿಳೆಯರು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಜೂಡಿವಾಸ್ ಸ್ವಾಗತಿಸಿದರು. ಅಂತೋಣಿ ಡಿಸೋಜ ನಿರೂಪಿಸಿದರು. ಕುಶಾಲನಗರ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಕೆ.ಎ.ಪೀಟರ್ ವಂದಿಸಿದರು.