ಮಡಿಕೇರಿ ಅ.21 NEWS DESK : ಕುಶಾಲನಗರ ವ್ಯಾಪ್ತಿಯ ಬೆಂಡೆಬೆಟ್ಟ ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿ ಹಾಡಹಗಲೇ ಕಾಡಾನೆಯೊಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಮುಂಜಾನೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆಯ ಗಮನಕ್ಕೆ ತಂದರು. ಸ್ಥಳಕ್ಕೆ ಆಗಮಿಸಿದ ಕುಶಾಲನಗರ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯ ಅತ್ತೂರು ಉಪವಲಯ ಅರಣ್ಯಾಧಿಕಾರಿ ಉಮೇಶ್ ನೇತೃತ್ವದ ಸಿಬ್ಬಂದಿಗಳು ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಲು ಅಗತ್ಯ ಕ್ರಮ ಕೈಗೊಂಡರು. ರಾತ್ರಿ ವೇಳೆ ಹಾರಂಗಿ ನದಿಯನ್ನು ದಾಟಿಕೊಂಡು ಬರುವ ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಯನ್ನು ನಷ್ಟ ಪಡಿಸುತ್ತಿದ್ದು, ಅರಣ್ಯ ಇಲಾಖೆ ಕಾಡಾನೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.