ಪೊನ್ನಂಪೇಟೆ ಅ.22 NEWS DESK : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ಪ್ರತಿ ವರ್ಷ ಸಂಸ್ಥೆಯ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ನೀಡಲಾಗುತ್ತಿರುವ ಕೆಎಂಎ ಪ್ರತಿಭಾ ಪುರಸ್ಕಾರದ ಜೊತೆಗೆ 2023-24ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಲಾ ಓರ್ವ ಸಾಧಕ ವಿದ್ಯಾರ್ಥಿಗೆ ಹಾಗೂ ಕಳೆದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಡೀ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ತಲಾ ಓರ್ವ ಮುಸ್ಲಿಂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗೆ ‘ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲು ಕೆ.ಎಂ.ಎ. ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಹಾಜಿ, ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ನೀಡುವ ವಿಶೇಷ ಪ್ರತಿಭಾ ಪುರಸ್ಕಾರವನ್ನು ಮುಂಬೈನ ಎನ್.ಸಿ.ಟಿ. ಗ್ರೂಪ್ ಮಾಲೀಕರೂ ಆಗಿರುವ ಸಂಸ್ಥೆ ಉಪಾಧ್ಯಕ್ಷ ಅಕ್ಕಳತಂಡ ಎಸ್.ಮೊಯಿದು ಅವರು ತಮ್ಮ ದಿವಂಗತ ಸಹೋದರರಾದ ಅಕ್ಕಳತಂಡ ಎಸ್.ಹಂಸ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸುತ್ತಿದ್ದು, ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ತಲಾ ಇಬ್ಬರು ಮುಸ್ಲಿಂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಸಂಸ್ಥೆಯ ಸದಸ್ಯರಾದ ಎಂ.ಎ.ಮಹಮ್ಮದ್ ಅವರು ಪ್ರಾಯೋಜಿಸಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಜಾತಿ-ಧರ್ಮ ಭೇದವಿಲ್ಲದೆ ಶೈಕ್ಷಣಿಕವಾಗಿ ಉತ್ತೇಜಿಸುವ ಉದ್ದೇಶದಿಂದ ಕೊಡವ ಮುಸ್ಲಿಂ ಅಸೋಸಿಯೇಷನ್ ಈ ವಿಶೇಷ ಯೋಜನೆಯನ್ನು ಆರಂಭಿಸಿದೆ ಎಂದು ತಿಳಿಸಿದ್ದಾರೆ. ಈ ವಿಶೇಷ ಪ್ರತಿಭಾ ಪುರಸ್ಕಾರವು ಆಕರ್ಷಕ ನಗದು ಬಹುಮಾನ ಸೇರಿದಂತೆ ಸ್ಮರಣಿಕೆ ಮತ್ತು ಪ್ರಶಂಸಾ ಪತ್ರವನ್ನು ಒಳಗೊಂಡಿರುತ್ತದೆ. ಮುಂದಿನ ತಿಂಗಳು ವಿರಾಜಪೇಟೆಯಲ್ಲಿ ಆಯೋಜಿಸಲಾಗಿರುವ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2024 ವಿತರಣಾ ಸಮಾರಂಭದಲ್ಲಿ ಈ 6 ಸಾಧಕ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಕೆ. ಎಂ. ಎ. ವಿಶೇಷ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು ಎಂದು ಸೂಫಿ ಹಾಜಿ ಮಾಹಿತಿ ನೀಡಿದ್ದಾರೆ.