ಮಡಿಕೇರಿ ಅ.22 NEWS DESK : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಸಂದರ್ಭ ರಾತ್ರಿ ಹಗಲೆನ್ನದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ನಗರಸಭೆಯ ಪೌರ ಕಾರ್ಮಿಕರಿಗೆ ವಿಶೇಷ ವೇತನ ನೀಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಸಂಘಟನೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಂಘಟನೆಯ ಪ್ರಮುಖರು ಪೌರ ಕಾರ್ಮಿಕರಿಗೆ ದಸರಾ ವಿಶೇಷ ವೇತನ ನೀಡುವ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿದರು. ದಸರಾ ವೀಕ್ಷಣೆಗೆಂದು ಪ್ರವಾಸಿಗರು ಸೇರಿದಂತೆ ಸಾವಿರಾರು ಮಂದಿ ಮಡಿಕೇರಿ ನಗರಕ್ಕೆ ಆಗಮಿಸಿದ ಸಂದರ್ಭ ಟನ್ ಗಟ್ಟಲೆ ಕಸದ ರಾಶಿ ಬಿದ್ದಿದೆ. ಇದನ್ನು ತೆರವುಗೊಳಿಸಿ ನಗರವನ್ನು ಸ್ವಚ್ಛಗೊಳಿಸಲು ಪೌರ ಕಾರ್ಮಿಕರು ಸಾಕಷ್ಟು ಶ್ರಮಿಸಿದ್ದಾರೆ. ಆರೋಗ್ಯದ ಮೇಲಿನ ದುಷ್ಪರಿಣಾಮವನ್ನು ಕೂಡ ಲೆಕ್ಕಿಸದೆ ಮಳೆಯ ನಡುವೆ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಇವರ ಶ್ರಮಕ್ಕೆ ತಕ್ಕ ಫಲವಾಗಿ ವಿಶೇಷ ವೇತನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾಕ್, ಉಪಾಧ್ಯಕ್ಷ ಇಬ್ರಾಹಿಂ ಹೊಸ ತೋಟ ಹಾಗೂ ಸದಸ್ಯ ಅಜೀಜ್ ಸುಂಟಿಕೊಪ್ಪ ಮನವಿ ಮಾಡಿದರು.