ಮಡಿಕೇರಿ ಅ.22 NEWS DESK : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಗೋ ಸದನ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಜಾಗವು ಸೋಮವಾರಪೇಟೆ ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆಯ ಹೆಸರಿಗೆ ನೊಂದಣಿಯಾಗಿರುವ ವಿಷಯವಾಗಿ ಗ್ರಾಮಸ್ಥರ ಸಭೆ ನಡೆಯಿತು. ಕೂಡಿಗೆ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಮತ್ತು ಹುದುಗೂರು ಗ್ರಾಮಸ್ಥರ ಬಹುದಿನಗಳ ಬೇಡಿಕೆಯ ಮನವಿಯ ಮೇರೆಗೆ ಕುಶಾಲನಗರದ ಪೊಲೀಸ್ ವಿಶ್ರಾಂತಿ ಗೃಹದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಎರಡೂ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಕೂಡಿಗೆ ಗ್ರಾ.ಪಂ ಆಡಳಿತ ಮಂಡಳಿ, ಹುದುಗೂರು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಯಿತು. ಪಶುಪಾಲನಾ ಇಲಾಖೆಗೆ ಕಾಯ್ದಿರಿಸಿದ ಜಾಗವು ಸಾಮಾಜಿಕ ಅರಣ್ಯ ಇಲಾಖೆಯ ಹೆಸರಿಗೆ ಕಂದಾಯ ಇಲಾಖೆಯ ಮುಖೇನ ಖಾತೆಯಾಗಿರುವ ವಿಷಯಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಮತ್ತು ಗ್ರಾಮಸ್ಥರು ಶಾಸಕ ಮಂತರ್ ಗೌಡ ಅವರ ಗಮನಕ್ಕೆ ತಂದರು. ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಬೆಳೆಯುತ್ತಿರುವ ಗಿಡಗಳ ಮಾಹಿತಿ, ಜಾಗದ ವಿವರ, ಅಲ್ಲದೇ ಪಶುಪಾಲನಾ ಇಲಾಖೆಗೆ ಬೇಕಾಗುವ ಜಾಗದ ವಿಷಯಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಪಡೆದ ಶಾಸಕರು, ಮುಂದಿನ ದಿನಗಳಲ್ಲಿ ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆಯ ಸಿ.ಸಿ.ಎಫ್. ಅವರ ಸಮ್ಮುಖದಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಪಶುಪಾಲನಾ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆಯು ಹುದುಗೂರು ಗ್ರಾಮದಲ್ಲೇ ಇರುವಂತೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸದ್ಯದಲ್ಲೇ ಜಿಲ್ಲಾ ಮಟ್ಟದ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಲಾಗುವುದು ಎಂದರು. ಅಲ್ಲದೇ ಸಭೆ ನಡೆಸಲು ದಿನಾಂಕವನ್ನು ನಿಗದಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ಕೂಡಿಗೆ ಗ್ರಾ.ಪಂ ಅಧ್ಯಕ್ಷ ಕೆ.ಟಿ.ಗಿರೀಶ್, ಸೋಮವಾರಪೇಟೆ ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆ ಪ್ರಭಾರ ವಲಯ ಅರಣ್ಯಾಧಿಕಾರಿ ಭವ್ಯ, ಪಶುಪಾಲನಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ಲಿಂಗರಾಜ್ ದೊಡ್ಡಮುನಿ, ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ರಾಜಶೇಖರ್ ಮೂಡಭಾಗಿ, ಕುಶಾಲನಗರ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಕೂಡಿಗೆ ಗ್ರಾ.ಪಂ ಸದಸ್ಯರಾದ ಹೆಚ್.ಎಸ್.ರವಿ, ರತ್ನಮ್ಮ, ಹುದುಗೂರು ಉಮಾಮಹೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ.ಚಾಮಿ, ಗ್ರಾಮದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಿರೀಶ್, ಹಾರಂಗಿ ನೀರು ಬಳಕೆದಾರ ಸಂಘದ ಮಾಜಿ ಅಧ್ಯಕ್ಷ ಐ.ಎಸ್.ಗಣೇಶ್ ಗ್ರಾಮದ ಪ್ರಮುಖರಾದ ಗಣೇಶ್, ಚಿಣ್ಣಪ್ಪ, ಟಿ.ಎಂ.ರವಿ. ಉಮಾ ಪ್ರಭಾಕರ್, ಸಮನ್ ಸುರೇಶ್, ಸೇರಿದಂತೆ ಗ್ರಾಮದ ಅನೇಕ ರೈತ ಮುಖಂಡರು, ಅಧಿಕಾರಿ ವರ್ಗದವರು ಹಾಜರಿದ್ದರು. ಕಂದಾಯ ಪರಿವೀಕ್ಷಕ ಸಂತೋಷ್ ಸ್ವಾಗತಿಸಿ, ವಂದಿಸಿದರು.