ನಾಪೋಕ್ಲು ಅ.28 NEWS DESK : ಹಲವು ವರ್ಷಗಳಿಂದ ಪರದಂಡ ಕುಟುಂಬಸ್ಥರಿಂದ ಕಾವೇರಿ ತೀರ್ಥೋದ್ಭವ ಕಳೆದು ಪವಿತ್ರ ತುಲಾ ಮಾಸದ ಹತ್ತನೇ ದಿನ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಆಚರಿಸುವ ಪತ್ತಾಲೋಧಿ ಉತ್ಸವ ಈ ಬಾರಿಯು ಶ್ರದ್ಧಾಭಕ್ತಿಯಿಂದ ನಡೆಯಿತು. ವಿವಿಧೆಡೆಯಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಸತ್ಯನಾರಾಯಣ ಪೂಜೆ ಮಹಾಪೂಜೆ, ತುಲಾಭಾರ ಸೇವೆ ಸಲ್ಲಿಸಿದರು. ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯ ಸೇರಿದಂತೆ ಪೇರೂರು, ನೆಲಜಿ ಗ್ರಾಮಗಳ ಇಗ್ಗುತ್ತಪ್ಪ ದೇವಾಲಯಗಳಲ್ಲೂ ಪತ್ತಲೋದಿ ಉತ್ಸವ ಸಂಭ್ರಮದಿಂದ ನಡೆಯಿತು. ದೇವತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ ವಿಶೇಷ ಪ್ರಾರ್ಥನೆ ಸಲ್ಲಿಸಿ ಪತ್ತಲೋಧಿ ದಿನ ಇಗ್ಗುತ್ತಪ್ಪನ ಆರಾಧನೆಗಾಗಿ ಆಯ್ಕೆ ಮಾಡಿದ ದಿನವಾಗಿದೆ. ನಾಡಿನ ಎಲ್ಲ ಸಮುದಾಯದ ಭಕ್ತವೃಂದಕ್ಕೆ ಕ್ಷೇಮಾಭಿವೃದ್ಧಿ ನೀಡಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭ ದೇವಾಲಯದ ಭಕ್ತ ಜನ ಸಂಘದ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಭಕ್ತಾದಿಗಳು ಹೆಚ್ಚಿನ ಸಂಖ್ಯೆಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ವರದಿ ದುಗ್ಗಳ ಸದಾನಂದ.