ಮಡಿಕೇರಿ ನ.21 NEWS DESK : ವಿರಾಜಪೇಟೆ ತಾಲ್ಲೂಕು ಮೈದಾನದಲ್ಲಿ ನಡೆದ ಕಲ್ಲುಬಾಯ್ಸ್ ಕಲ್ಲುಬಾಣೆ ಲೈಕ್ಸ್ ಫ್ಯಾಶನ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಿಯೋನ್ ಎಫ್.ಸಿ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸುವುದರ ಮೂಲಕ ಅತ್ಯಾಕರ್ಷಕ ಟ್ರೋಫಿಯೊಂದಿಗೆ ಒಂದು ಲಕ್ಷದ 25 ಸಾವಿರ ರೂ ನಗದು ತಮ್ಮದಾಗಿಸಿಕೊಂಡರು. ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ನಿಯೋನ್ ಎಫ್.ಸಿ ತಂಡವು ಕೊಡಗಿನ ಬಲಿಷ್ಠ ತಂಡವಾದ ಮಿಡ್ ಸಿಟಿ ಸುಂಟ್ಟಿಕೊಪ್ಪ ತಂಡವನ್ನು ಎದುರಿಸಿತು. ಎರಡು ತಂಡವು ಫೈನಲ್ ಪಂದ್ಯದಲ್ಲಿ 1-1 ಗೋಲುಗಳನ್ನು ಬಾರಿಸಿ ಸಮಬಲ ಸಾಧಿಸಿತು. ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ 2-1 ಗೋಲುಗಳ ಅಂತರದಿಂದ ನಿಯೋನ್ ಎಫ್.ಸಿ ಗೆಲುವು ಸಾಧಿಸಿತು. ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ನಿಯೋನ್ ಎಫ್.ಸಿ ಅಮ್ಮತ್ತಿ ಹಾಗೂ ಟ್ರೆಡೀಶನಲ್ ಟ್ರೂರಿಸಮ್ ತಂಡಗಳ ನಡುವೆ ನಡೆಯಿತು. ಎರಡು ತಂಡಗಳು ಯಾವುದೇ ಗೋಲುಗಳಿಸದೆ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್ ನಲ್ಲಿ ಕೂಡ ಎರಡು ತಂಡಗಳು 5-5 ಗೋಲುಗಳನ್ನು ಬಾರಿಸಿ ಸಮಬಲ ಸಾಧಿಸಿತು. ಅಂತಿಮವಾಗಿ ಟಾಸ್ ಮೂಲಕ ವಿಜೇತ ತಂಡವನ್ನು ಆಯ್ಕೆಮಾಡಲಾಯಿತು. ಟಾಸ್ ಅದೃಷ್ಟ ಪರೀಕ್ಷೆಯಲ್ಲಿ ನಿಯೋನ್ ಎಫ್.ಸಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.ಎರಡನೇ ಸೆಮಿಫೈನಲ್ ಪಂದ್ಯವು ಮಿಡ್ ಸಿಟಿ ಸುಂಟ್ಟಿಕೊಪ್ಪ ಹಾಗೂ ಅಮಿಗೋಸ್ ಕಲ್ಲುಬಾಣೆ ತಂಡಗಳ ನಡುವೆ ನಡೆಯಿತು. ನಿಗದಿತ ಸಮಯದಲ್ಲಿ ಎರಡು ತಂಡಗಳು 1-1 ಗೋಲು ಬಾರಿಸಿ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್ ನಲ್ಲಿ ಮಿಡ್ ಸಿಟಿ ತಂಡವು 7-6 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಮಿಡ್ ಸಿಟಿ ತಂಡದ ಗೋಲ್ ಕೀಪರ್ ಕೆವಿನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡರು. ಕಲ್ಲು ಬಾಯ್ಸ್ ಫ್ಯಾಶನ್ ಕಪ್ ಎರಡನೇ ಆವೃತ್ತಿಯ ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ನಿಯೋನ್ ಎಫ್.ಸಿ ಗೋಲ್ ಕೀಪರ್ ಶಾಹುಲ್ ಪಡೆದುಕೊಂಡರು. ಅತ್ಯುತ್ತಮ ಗೋಲ್ ಕೀಪರ್ ಮಿಡ್ ಸಿಟಿ ತಂಡದ ಕೆವಿನ್,ಅತ್ಯುತ್ತಮ ಡಿಫೆಂಡರ್ ನಿಯೋನ್ ಎಫ್.ಸಿ ತಂಡದ ಮಣಿ, ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಮಣಿ ಪಡೆದುಕೊಂಡರು.