ಮಡಿಕೇರಿ ನ.22 NEWS DESK : ಸಾಮಾಜಿಕ ಜಾಲತಾಣಗಳಲ್ಲಿ ದೇಶದ ವೀರಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಅವಹೇಳನ ಮಾಡಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳು ಈ ದೇಶ ಕಂಡ ಅಪ್ರತಿಮ ಸೇನಾನಿಗಳಾಗಿದ್ದಾರೆ. ಇವರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಶ್ರೀವತ್ಸ ಭಟ್ ಎಂಬ ಹೆಸರಿನ ಖಾತೆ ಮೂಲಕ ಕಿಡಿಗೇಡಿಯೊಬ್ಬ ವೀರ ಸೇನಾನಿಗಳನ್ನು ಅವಮಾನಿಸಿದ್ದು, ಈತನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. ಸೇನಾನಿಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ಪೋಸ್ಟ್ ಮಾಡಿರುವುದಲ್ಲದೆ ಕೊಡವರ ಬಗ್ಗೆಯೂ ಅಗೌರವದ ಮಾತುಗಳನ್ನಾಡಿದ್ದಾನೆ. ಭಾರತೀಯ ಸೇನೆಗೆ ಮತ್ತು ದೇಶಕ್ಕೆ ತಮ್ಮ ಶೂರತ್ವದ ಮೂಲಕವೇ ಅಪಾರ ಕೊಡುಗೆಯನ್ನು ನೀಡಿರುವ ವೀರರ ನಾಡು ಕೊಡಗಿನ ಕಣ್ಮಣಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಅವಹೇಳನ ಮಾಡಿರುವ ದೇಶದ್ರೋಹಿಯನ್ನು ಪೊಲೀಸರು ತಕ್ಷಣ ಬಂಧಿಸಬೇಕು ಮತ್ತು ಸೂಕ್ತ ತನಿಖೆ ನಡೆಸಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹಂಚೆಟ್ಟಿರ ಮನು ಮುದ್ದಪ್ಪ ಆಗ್ರಹಿಸಿದ್ದಾರೆ.