ಮಡಿಕೇರಿ ಡಿ.9 NEWS DESK : ಮೈಷುಗರ್ ಫ್ರೌಡಶಾಲೆಯ ಅಮೃತಮಹೋತ್ಸವದ ಪ್ರಯುಕ್ತ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಅಂಡರ್ 17 ಕಾಲ್ಚೆಂಡು ಪಂದ್ಯಾವಳಿಯಲ್ಲಿ ನಕ್ಷತ್ರ ಎಫ್.ಸಿ ಕೊಡಗು ತಂಡವು ದ್ವಿತೀಯ ಸ್ಥಾನ ಪಡೆದಿದೆ. ಜಿದ್ದಾಜಿದ್ದಿನಿಂದ ಕೂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ತಂಡದ ವಿರುದ್ಧ ನಿಗದಿತ ಸಮಯದಲ್ಲಿ 1-1 ಗೋಲುಗಳಿಂದ ಸಮಬಲ ಸಾಧಿಸಿತು. ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಕೊಡಗು ತಂಡವು 4-3 ಗೋಲುಗಳ ಅಂತರದಿಂದ ಸೆಮಿಫೈನಲ್ ಪಂದ್ಯ ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ನಕ್ಷತ್ರ ಎಫ್.ಸಿ ಕೊಡಗು ತಂಡದ ವಿರುದ್ಧ ಡಿಯುಎಫ್ಎ ಹಾವೇರಿ ತಂಡವು ಗೆಲುವು ಸಾಧಿಸಿತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ನಕ್ಷತ್ರ ಎಫ್.ಸಿ ಕೊಡಗು ತಂಡವು ಪೀಪಲ್ ಟ್ರೀ ಬಳ್ಳಾರಿ ತಂಡದ ವಿರುದ್ಧ 5-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ದ್ವಿತೀಯ ಪಂದ್ಯದಲ್ಲಿ ಟಿಸಿಎಫ್ಎ ಹುಬ್ಬಳ್ಳಿ ತಂಡದ ವಿರುದ್ಧ 2-2 ಗೋಲುಗಳ ಸಮಬಲ ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿತು.ನಕ್ಷತ್ರ ಎಫ್.ಸಿ ಕೊಡಗು ತಂಡದ ಮುಖ್ಯ ತರಬೇತುದಾರರಾಗಿ ಹೆಚ್.ಹೆಚ್ ಹರೀಶ್, ವ್ಯವಸ್ಥಾಪಕರಾಗಿ ತೇಜಸ್, ಸಹ ತರಬೇತುದಾರರಾಗಿ ವೇಣು ಹಾಗೂ ಮನೋಜ್ ಕಾರ್ಯನಿರ್ವಹಿಸಿದರು.