ಕುಶಾಲನಗರ ಡಿ.10 NEWS DESK : ವಿದ್ಯಾರ್ಥಿಗಳು ಮೊಬೈಲ್ ಗಳ ದಾಸರಾಗದೇ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ತಮ್ಮಲ್ಲಿನ ಮಸ್ತಕದ ಜ್ಞಾನವನ್ನು ಹೆಚ್ಚಿಸಿಕೊಂಡು ಸಮಾಜದಲ್ಲಿ ಆದರ್ಶ ಪ್ರಾಯರಾಗಬೇಕೆಂದು ಚಿಕ್ಕೋಡಿಯ ಕುಸುಮಾವತಿ ಮಿರಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೊಂಬಯ್ಯ ಹೊನ್ನಲಗೆರೆ ಕರೆ ನೀಡಿದರು. ಕುಶಾಲನಗರದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಇಂದು ಜಗತ್ತು ಬೆರಳ ತುದಿಯಲ್ಲಿದ್ದರೂ ಕೂಡ ಸಾಧಕರಾಗುವಲ್ಲಿ ವಿದ್ಯಾರ್ಥಿಗಳು ಹಿಂದುಳಿಯುತ್ತಿದ್ದಾರೆ. ವಿಶ್ವಾಸ, ಆಸಕ್ತಿ ಹಾಗೂ ದೃಢ ಸಂಕಲ್ಪಗಳ ಕೊರತೆಯಿಂದಾಗಿ ತಂತ್ರಜ್ಞಾನಗಳನ್ನು ಒಳಿತಿಗೆ ಬಳಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ವಿಫಲರಾಗುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಶಾಲೆ, ಕುಟುಂಬ, ಸಮಾಜ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳನ್ನು ಕಟ್ಟಿಕೊಡುತ್ತವೆ ಎಂದು ಡಾ.ಹೊಂಬಯ್ಯ ಹೇಳಿದರು. ಮೈಸೂರು ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಪುಷ್ಪಲತಾ ಮಾತನಾಡಿ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಸಲುವಾಗಿ ಹೆತ್ತವರು ಎದುರಿಸುತ್ತಿರುವ ಸಂಕಷ್ಟಗಳನ್ನು ವಿದ್ಯಾರ್ಥಿಗಳು ಅರಿಯಬೇಕು. ಸ್ಪಷ್ಟವಾದ ಗುರಿಯೊಂದಿಗೆ ಮುಂದೆ ಸಾಗಬೇಕು. ಪ್ರಪಂಚದಲ್ಲಿ ಜ್ಞಾನಕ್ಕಿಂತ ಮಿಗಿಲಾದ ಬೇರಾವುದೇ ಸಂಪತ್ತಿಲ್ಲ ಎಂದು ಹೇಳಿದ ಅವರು, ತಮ್ಮ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಕನ್ನಡ ಭಾರತಿ ಪದವಿ ಕಾಲೇಜು ವಿಭಾಗದ ಪ್ರಾಂಶುಪಾಲ ಕೆ.ಎಸ್. ರುದ್ರಪ್ಪ, ಮಂಡ್ಯ ಉಪ ತಹಸೀಲ್ದಾರ್ ನಂದಕುಮಾರ್,
ಕುಶಾಲನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪುಷ್ಪ, ಕಾಲೇಜು ಆಡಳಿತಾಧಿಕಾರಿ ಜೈವರ್ಧನ್, ಕಾಲೇಜಿನ ಪಿಯು ವಿಭಾಗದ ಪ್ರಾಂಶುಪಾಲ ಡಾ.ನಾಗೇಂದ್ರ ಸ್ವಾಮಿ ಇದ್ದರು. ಉಪನ್ಯಾಸಕಿ ವಿನಿತಾ ನಿರೂಪಿಸಿದರು. ರಶ್ಮಿ ಸ್ವಾಗತಿಸಿದರು. ಸತೀಶ್ ವಂದಿಸಿದರು. ನಂತರ
ಕಾಲೇಜು ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ಗಮನ ಸೆಳೆಯಿತು.