ಮಡಿಕೇರಿ ಡಿ.10 NEWS DESK : ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಮಾನ ಮಾಡಿದ ವ್ಯಕ್ತಿಯ ಗಡಿಪಾರಿಗೆ ಆಗ್ರಹಿಸಿ ಕೊಡಗು ಸರ್ವ ಜನಾಂಗಗಳ ಒಕ್ಕೂಟ ಡಿ.12 ರಂದು ಕರೆ ನೀಡಿರುವ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗಿನ ಕೊಡಗು ಬಂದ್ ಗೆ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಬೆಂಬಲ ಸೂಚಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಅವರು, ಭಾರತೀಯ ಸೇನೆಯ ಪಿತಾಮಹ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ಗಳ ಜನರಲ್ ಖ್ಯಾತಿಯ ಜನರಲ್ ತಿಮ್ಮಯ್ಯ ಅವರನ್ನು ಅವಮಾನಿಸಿರುವುದು ಖಂಡನೀಯ. ಈ ಪ್ರಕರಣ ಕೊಡಗು ಮಾತ್ರವಲ್ಲದೆ ಇಡೀ ದೇಶದ ಜನರಿಗೆ ನೋವನ್ನುಂಟು ಮಾಡಿದೆ. ದೇಶ ಕಂಡ ಅಪ್ರತಿಮ ವೀರ ಸೇನಾನಿಗಳಿಗೆ ಅಗೌರವ ತೋರಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ಕರೆ ನೀಡಲಾಗಿರುವ ಬಂದ್ ಗೆ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ಸಮಸ್ತ ಜನತೆ ಕೂಡ ಬೆಂಬಲ ನೀಡುವ ಮೂಲಕ ಬಂದ್ ನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.