ಮಡಿಕೇರಿ ಡಿ.10 NEWS DESK : ಕರ್ನಾಟಕ ನಿವೃತ್ತ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.16 ರಂದು ಸುವರ್ಣ ಸೌಧ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಕೊಡಗು ಜಿಲ್ಲಾ ಘಟಕದ ಸಂಚಾಲಕ ಪಿ.ಎಸ್.ಜನಾರ್ಧನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7ನೇ ವೇತನ ಆಯೋಗ ಅವಧಿಯಲ್ಲಿಯೇ ಸೇವೆ ಸಲ್ಲಿಸಿರುವ ಕರ್ನಾಟಕ ನಿವೃತ್ತ ನೌಕರರಿಗೆ ಡಿ.ಸಿ.ಆರ್.ಜಿ, ಕಮ್ಯುಟೇಶನ್, ಗಳಿಕೆ ರಜೆ, ನಗದೀಕರಣದ ಮೊತ್ತವನ್ನು ನೀಡದೆ ಇರುವುದು ಖಂಡನೀಯ ಎಂದರು. ರಾಜ್ಯದಲ್ಲಿ 4.50ಲಕ್ಷ ನಿವೃತ್ತ ನೌಕರರಿದ್ದು, 1.7.2022 ರಿಂದ 31.7.2024ರ ಅವಧಿಯಲ್ಲಿ ನಿವೃತ್ತರಾದ 26,423 ಅಧಿಕಾರಿ, ನೌಕರ ವರ್ಗದವರಿಗೆ 7ನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತ ಆರ್ಥಿಕ ಸೌಲಭ್ಯವನ್ನು ನೀಡದೆ 6ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿಯೇ ನೀಡಲಾಗಿದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರಿಗೆ ಎ ದರ್ಜೆಯಿಂದ ಡಿ ದರ್ಜೆಯ ನೌಕರರಿಗೆ 6 ಲಕ್ಷದವರೆಗೆ ಆರ್ಥಿಕ ನಷ್ಟವಾಗಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯುವಲ್ಲಿ ಸತತ ನಾಲ್ಕು ತಿಂಗಳುಗಳಿಂದ ಸಮಾವೇಶಗೊಂಡು ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ, ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷರಿಗೆ ವಿವಿಧ ಮೂಲಗಳಿಂದ ಖುದ್ದಾಗಿ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗಿದೆ. ಆದರೆ ಸರಕಾರ ಇಲ್ಲಿಯವರೆಗೆ ಬೇಡಿಕೆ ಈಡೇರಿಕೆಗೆ ಗಮನಹರಿಸದೇ ಇರುವುದು ಖಂಡನೀಯ ಎಂದರು. ಡಿ.16 ರಂದು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ಎದುರು 26,432 ನಿವೃತ್ತ ನೌಕರರು ಸಮಾವೇಶಗೊಂಡು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಲಾಗವುದೆಂದು ಜನಾರ್ಧನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸಂಚಾಲಕರಾದ ಕೆ.ವಿ.ಮೋಹನ್, ಎಂ.ಸಿ.ಬೆಳ್ಯಪ್ಪ, ಕುಸುಮ, ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಅಂತೋಣಿ ಡಿಸೋಜ ಹಾಗೂ ವಿರಾಜಪೇಟೆ ಸಂಚಾಲಕ ವಿ.ಕೆ.ಲಲಿತ ಉಪಸ್ಥಿತರಿದ್ದರು.