ಮಡಿಕೇರಿ ಡಿ.16 NEWS DESK : ಯಾವುದೇ ಕಠಿಣ ಪರಿಸ್ಥಿತಿಗಳ ನಡುವೆಯೂ ಧೈರ್ಯದಿಂದ ಕರ್ತವ್ಯನಿಷ್ಟರಾಗಿ ಮುನ್ನಡೆಯುತ್ತಿರುವ ‘ಬ್ರಾಹ್ಮಣ’ ಸಮೂಹ ಇತ್ತೀಚಿನ ದಿನಗಳಲ್ಲಿ, ಅನಗತ್ಯವಾದ ಅವಮಾನ ಮತ್ತು ಅವಹೇಳನಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭ ಬ್ರಾಹ್ಮಣ ಸಮೂಹ ತನ್ನ ಸೌಮ್ಯ ಸ್ವಭಾವವನ್ನು ಮೀರಿ ದೃಢ ನಿಲುವುಗಳನ್ನು ತಳೆದು ಹೆಜ್ಜೆಹಾಕಬೇಕೆಂದು ಮೇಜರ್ ವೆಂಕಟಗಿರಿಯವರು ಕರೆ ನೀಡಿದರು. ನಗರದ ಶಾನಭಾಗ್ ಸೆಂಟರ್ ಸಭಾ ಭವನದಲ್ಲಿ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ಸಮಾಜ ಬಾಂಧವರಿಗೆ ಹಮ್ಮಿಕೊಳ್ಳಲಾಗಿದ್ದ ವೀರಾಜಪೇಟೆ ತಾಲೂಕು ಮಟ್ಟದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿ, ಬ್ರಾಹ್ಮಣರು ತಮ್ಮ ಬುದ್ಧಿಮತ್ತೆ ಹಾಗೂ ಕರ್ತವ್ಯಪರತೆಯಿಂದ ಯಾವುದೇ ಕ್ಷೇತ್ರಕ್ಕೆ ಹೋದರೂ ಅಲ್ಲಿ ಸೈ ಅನ್ನಿಸಿಕೊಳ್ಳಬಲ್ಲ ಸಾಮಥ್ರ್ಯ ಹೊಂದಿದ್ದಾರೆಂದು ನುಡಿದರು. ಪ್ರಗತಿಪರ ಕೃಷಿಕರು,ವಾಣಿಜ್ಯೋದ್ಯಮಿಗಳು ಹಾಗೂ ಶಾನಭಾಗ್ ಸೆಂಟರ್ ಮಾಲೀಕರಾದ ನಿಖಿಲ್ ರಾಮಮೂರ್ತಿಯವರು ಮಾತನಾಡಿ, ಕಲೆ, ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಿಗೆ ಯಾವತ್ತೂ ತಮ್ಮ ಸಹಕಾರವಿದೆಯೆಂದು ತಿಳಿಸಿದರು. ನಿಧಿಯ ವೀರಾಜಪೇಟೆ ತಾಲೂಕಿನ ನಿರ್ದೇಶಕರೂ ಹಾಗೂ ನಿಧಿಯ ಸಹ ಕಾರ್ಯದರ್ಶಿಗಳಾದ ಎ.ವಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಾಹ್ಮಣ ಸಮಾಜದ ಒಗ್ಗೂಡುವಿಕೆಗೆ ಹಾಗೂ ಸೌಹಾರ್ದ ಸಂಬಂಧವನ್ನು ಬೆಸೆದು ಜೊತೆಯಾಗಿ ಮುಂದಕ್ಕೆ ಸಾಗಬೇಕಾಗಿರುವುದರಿಂದ ನಿಧಿಯು ಕ್ರೀಡೆ ಹಾಗೂ ಇತರ ಚಟುವಟಿಕೆಗಳನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು.
ಸ್ಪರ್ಧೆಗೆ ಚಾಲನೆ : ನಿಧಿಯ ಸದಸ್ಯರು ಹಾಗೂ ವಿರಾಜಪೇಟೆಯ ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘದ ಅಧ್ಯಕ್ಷರಾದ ಹರಿಶಂಕರ್ ಪ್ರಸಾದ್ ಪಾಲಂಗಾಲರವರು ಸಮಾಜದ ಗಣ್ಯರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಮಡಿಕೇರಿಯಿಂದ ನಿಧಿಯ ಪ್ರತಿನಿಧಿಯಾಗಿ ನಿರ್ದೇಶಕರಾದ ಭರತೇಶ ಖಂಡಿಗೆ ಭಾಗವಹಿಸಿ, ಸ್ಪರ್ಧೆಗಳನ್ನು ಎ.ವಿ.ಮಂಜುನಾಥ್ ಅವರೊಂದಿಗೆ ಒಡಗೂಡಿ ಯಶಸ್ವಿಯಾಗಿ ನಡೆಯಲು ಸಹಕರಿಸಿದರು. ವಿರಾಜಪೇಟೆಯ ವಕೀಲೆ ಸುಮಾ ಎಸ್.ಎನ್. ರಂಗೋಲಿ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರೆ, ಇನ್ನುಳಿದ ಕ್ರೀಡೆಗಳಿಗೆ ಮಡಿಕೇರಿಯಿಂದ ಬಂದ ಭರತೇಶ ಖಂಡಿಗೆ ಹಾಗೂ ಎ.ವಿ. ಮಂಜುನಾಥ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ತಾಲ್ಲೂಕು ಮಟ್ಟದಲ್ಲಿ ಹರಿಶಂಕರ್ ಪ್ರಸಾದ್ ರವರು ವೈಯಕ್ತಿಕವಾಗಿ ನಗದು ಬಹುಮಾನಗಳನ್ನು ನೀಡಿ ಪ್ರೋತ್ಸಾಹಸಿದರು. ಖ್ಯಾತ ಪಕ್ಷಿತಜ್ಞ ಹಾಗೂ ಪರಿಸರ ಪ್ರೇಮಿ ಡಾ.ನರಸಿಂಹನ್, ವೀರಾಜಪೇಟೆಯ ವಕೀಲರಾದ ಎಸ್.ಆರ್. ಜಗದೀಶ್, ದೇವಣಗೇರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಖ್ಯಾತ ಯೋಗ ತರಬೇತುದಾರರಾದ ಪಿ.ಎ.ಲಕ್ಷ್ಮೀನಾರಾಯಣ, ವನಜಾಕ್ಷಿ ವೆಂಕಟಗಿರಿ, ಸಿಐಎಸ್‍ಎಫ್ ಸಬ್ ಇನ್‍ಸ್ಪ್ಪೆಕ್ಟರ್ ನಾರಾಯಣ ಶಾಸ್ತ್ರಿ ಸಿ.ಎಂ. ಹಾಗೂ ಹಲ ಗಣ್ಯರು ಪಾಲ್ಗೊಂಡಿದ್ದರು.