ಮಡಿಕೇರಿ NEWS DESK ಡಿ.16 : ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ತೆರ್ಮೆಮೊಟ್ಟೆಯ ಶ್ರೀ ಆದಿ ಶಕ್ತಿ ಮತ್ತು ಧರ್ಮದೈವ ಹಾಗೂ ಪಾಷಾಣ ಮೂರ್ತಿ ಪರಿವಾರ ದೈವಗಳ ಧರ್ಮ ಚಾವಡಿಯ ವತಿಯಿಂದ ‘ಶ್ರೀ ಆದಿ ಶಕ್ತಿ, ಧರ್ಮದೈವ ಮತ್ತು ಪರಿವಾರ ದೈವ’ ಪುನರ್ ಪ್ರತಿಷ್ಠಾಪನೆ ಹಾಗೂ ನೇಮೋತ್ಸವ ಮುಂದಿನ ಫೆ.6 ರಿಂದ 9ರವರೆಗೆ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಆದಿ ಶಕ್ತಿ ಮತ್ತು ಧರ್ಮದೈವ ಹಾಗೂ ಪಾಷಾಣ ಮೂರ್ತಿ ಪರಿವಾರ ದೈವಗಳ ಧರ್ಮ ಚಾವಡಿಯ ಪ್ರಮುಖರು ಹಾಗೂ ದೈವ ಆರಾಧಕರಾದ ಹರೀಶ್ ಬಿ.ಜೆ. ತಮ್ಮ ತಂದೆ ದಿ.ಜತ್ತಪ್ಪ ಪೂಜಾರಿ ಹಾಗೂ ತಾಯಿ ದಿ.ಬಿ.ಜೆ.ಗುರುವಮ್ಮ ಅವರಿಂದ ಸುಮಾರು 55 ವರ್ಷಗಳಿಂದ ಆರಾಧನೆಗೊಳ್ಳುತ್ತ ಬಂದಿರುವ ದೈವ ಸನ್ನಿಧಿಯಲ್ಲಿ, ಅವರ ತರುವಾಯ ಪೂಜಾ ಕಾರ್ಯಗಳು ಸ್ಥಗಿತಗೊಂಡಿತ್ತು. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯಿಂದ ಕಂಡು ಬಂದ ವಿಚಾರಗಳಂತೆ ಇದೀಗ ಸುಮಾರು 22 ಲಕ್ಷ ರೂ. ವೆಚ್ಚದಲ್ಲಿ ದೈವ ಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದರು.
ಪುನರ್ ಪ್ರತಿಷ್ಠಾ ಕಾರ್ಯಗಳು ಕಾವಾಡಿಯ ಕಾನ ರಾಮಚಂದ್ರ ಭಟ್ ಅವರ ನೇತೃತ್ವದಲ್ಲಿ ನಡೆಯಲಿದೆ. ಫೆ.6 ರಂದು ಸಂಜೆ 4 ಗಂಟೆಯಿಂದಲೇ ವಿವಿಧ ಧಾರ್ಮಿಕ ಕೈಂಕರ್ಯಗಳು ಹಾಗೂ ಹೋಮ ಹವನಗಳು ಆರಂಭವಾಗಲಿವೆ. ಫೆ.7 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ಚಂಡಿಕಾ ಹೋಮ, ಪ್ರತಿಷ್ಠಾ ಹೋಮ, ಬ್ರಹ್ಮಕಳಸ ಪ್ರತಿಷ್ಠೆ, 9.55ರಿಂದ 10.39ರ ಮೀನ ಲಗ್ನದಲ್ಲಿ ದೈವಗಳ ಬಿಂಬ ಪ್ರತಿಷ್ಠೆ, ಕಲಶಾಭಿಷೇಕ, ವೆಂಕಟರಮಣ ಪೂಜೆ, ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆಯೆಂದು ಮಾಹಿತಿ ನೀಡಿದರು. ಫೆ.8ರಂದು ಸಂಜೆ 6.30ಕ್ಕೆ ದೈವದ ಭಂಡಾರ ಇಳಿಸುವುದು, ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. 8.30 ಗಂಟೆಗೆ ಕಲ್ಲಾಲ್ದ ಗುಳಿಗ ನೇಮೋತ್ಸವ, ಪೊಸಭೂತ ದೈವ, ವರ್ನರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಮತ್ತು ಕಲ್ಕುಡ, ಗೂಡು ಪಂಜುರ್ಲಿ, ಅಣ್ಣಪ್ಪ ಪಂಜುರ್ಲಿ, ಮಂತ್ರ ದೇವತೆ, ಮಂತ್ರವಾದಿ ಗುಳಿಗ, ಕೊರಗಜ್ಜ ದೈವದ ನೇಮ ನಡೆಯಲಿದೆ ಎಂದು ತಿಳಿಸಿದರು. ಫೆ.9ರಂದು ಸಂಜೆ 7 ಗಂಟೆಗೆ ದೈವದ ಭಂಡಾರ ಇಳಿಸುವುದು, ರಾತ್ರಿ 8 ಗಂಟೆಗೆ ಅನ್ನದಾನ, 9 ಕ್ಕೆ ಪಾಷಾಣಮೂರ್ತಿ (ಕಲ್ಲುರ್ಟಿ) ದೈವದ ಹಾಗೂ ಅಂಗಾರ ಬಾಕೂಡ ದೈವದ ನೇಮೋತ್ಸವ ನಡೆಯಲಿದೆ. ಉತ್ಸವಕ್ಕೆ ಧನಸಹಾಯ ಮಾಡಲು ಇಚ್ಛಿಸುವವರು 8073090533 ಸಂಪರ್ಕಿಸಬಹುದೆಂದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ದೈವಾರಾಧಕರು ಮತ್ತು ದೈವನರ್ತಕರ ಸಂಘದ ಸ್ಥಾಪಕಾಧ್ಯಕ್ಷ ಪಿ.ಎಂ.ರವಿ, ಅಧ್ಯಕ್ಷ ಸದಾಶಿವ ರೈ, ಶ್ರೀ ಆದಿ ಶಕ್ತಿ ಮತ್ತು ಧರ್ಮದೈವ ಹಾಗೂ ಪಾಷಾಣ ಮೂರ್ತಿ ಪರಿವಾರ ದೈವಗಳ ಧರ್ಮ ಚಾವಡಿಯ ಕಿಶೋರ್ ಬಿ.ಎನ್ ಹಾಗೂ ಬಿ.ಎಸ್.ಗಗನ್ ಉಪಸ್ಥಿತರಿದ್ದರು.