ಮಡಿಕೇರಿ ಡಿ.16 NEWS DESK : ಕೊಡವ ಮಕ್ಕಡ ಕೂಟದ 105ನೇ ಪುಸ್ತಕ, ಹಾಕಿ ಆಟಗಾರ, ಲೇಖಕ ಚೆಪ್ಪುಡೀರ ಕಾರ್ಯಪ್ಪ ಅವರು ರಚಿಸಿರುವ “ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ” ಡಿ.22 ರಂದು ಬಿಡುಗಡೆಯಾಗಲಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ನಗರದ ಪತ್ರಿಕಾಭವನದ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಚೆಪ್ಪುಡೀರ ಎಂ.ಪೂಣಚ್ಚ ಉದ್ಘಾಟಿಸಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, 1975ರ ವಿಶ್ವಕಪ್ ಹಾಕಿ ಪಂದ್ಯಾವಳಿಯ ವಿಜೇತ ಪೈಕೇರ ಇ.ಕಾಳಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಹಾಗೂ ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ ಪುಸ್ತಕದ ಬರಹಗಾರ ಚೆಪ್ಪುಡೀರ ಎ.ಕಾರ್ಯಪ್ಪ ಉಪಸ್ಥಿತರಿರುವರು. ಲೇಖಕ ಚೆಪ್ಪುಡೀರ ಕಾರ್ಯಪ್ಪ ಆಟಗಾರನಾಗಿ, ತೀರ್ಪುಗಾರನಾಗಿ ಹಾಗೂ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಿದ್ದು, ಯುವ ಆಟಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ರಾಷ್ಟ್ರೀಯ ಮಟ್ಟ ಹಾಗೂ ಒಲಂಪಿಕ್ಸ್ನಲ್ಲಿ ಆಡಿ ಪದಕ ಗೆದ್ದ ಆಟಗಾರರ ಜೀವನ ಚರಿತ್ರೆಯನ್ನು ಹೊರತಂದಿದ್ದಾರೆ. ಈ ಕೃತಿಯಲ್ಲಿ ಎಷ್ಟೋ ತೆರೆಮರೆಯ ಪ್ರತಿಭೆಗಳನ್ನು ಪರಿಚಯಿಸಿದ್ದಾರೆ. ಅಲ್ಲದೇ ಕಷ್ಟಪಟ್ಟು ಮುಂದೆ ಬಂದ ಮಹಾನ್ ಹಾಕಿ ಆಟಗಾರರ ಪರಿಚಯವನ್ನು ಕೂಡ ನೀಡಿದ್ದಾರೆ. ಈ ಕೃತಿಯಲ್ಲಿ ಹಾಕಿ ಮಾತ್ರವಲ್ಲದೇ ಕುದುರೆಸವಾರಿ, ಕ್ರಿಕೆಟ್, ಕರಾಟೆ, ವಾಲಿಬಾಲ್, ಅಥ್ಲೆಟಿಕ್ಸ್, ಬಾಕ್ಸಿಂಗ್ ಕಾಲ್ಫ್ ಹಾಗೂ ಬ್ಯಾಡ್ಮಿಂಟನ್ ಆಟಗಾರರ ಜೀವನ ಚರಿತ್ರೆಯನ್ನು ಕೂಡ ವಿವರಿಸಲಾಗಿದೆ. ಇದು ಶಕ್ತಿ ದಿನಪತ್ರಿಕೆ ಹಾಗೂ ಪೂಮಾಲೆ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವಾಗಿದೆ. ಸುಮಾರು 1,500 ಪುಸ್ತಕಗಳನ್ನು ಕೊಡಗಿನ ಎಲ್ಲಾ ಶಾಲಾ ಕಾಲೇಜು, ಪದವಿ ಪೂರ್ವ ಕಾಲೇಜು, ಸ್ನಾತಕೋತ್ತರ ಕಾಲೇಜು ಹಾಗೂ ಪಂಚಾಯಿತಿ ಗ್ರಂಥಾಲಯಗಳಿಗೆ ಉಚಿತವಾಗಿ ನೀಡಲಾಗುವುದು. ಕಾರ್ಯಕ್ರಮದಲ್ಲಿ ಹೆಚ್ಚಿನ ಕ್ರೀಡಾಭಿಮಾನಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಪಾಲ್ಗೊಳ್ಳುವಂತೆ ಬೊಳ್ಳಜಿರ ಬಿ.ಅಯ್ಯಪ್ಪ ಮನವಿ ಮಾಡಿದ್ದಾರೆ.













