ಮಡಿಕೇರಿ ಡಿ.16 NEWS DESK : ವಿಶೇಷ ಚೇತನ ಮಕ್ಕಳು ದೇವರ ಮಕ್ಕಳು, ಅವರು ಸಮಾಜದಲ್ಲಿ ಎಲ್ಲರಂತೆ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ರೀಬಿಲ್ಡ್ ಕೊಡಗು ಸಂಸ್ಥೆ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ಸಹಕಾರ ನೀಡಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕೆ.ಎ.ಕುಶಾಲಪ್ಪ ಭರವಸೆ ನೀಡಿದ್ದಾರೆ. ರೀಬಿಲ್ಡ್ ಕೊಡಗು ಸಂಸ್ಥೆ ವತಿಯಿಂದ ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ಶಾಲಾ ಸಿದ್ಧತಾ ಕೇಂದ್ರದಲ್ಲಿ ನಡೆದ ವಿಶೇಷ ಅಗತ್ಯತೆವುಳ್ಳ ವಿದ್ಯಾರ್ಥಿಗಳ ಪೋಷಕರ ಆಪ್ತ ಸಮಾಲೋಚನಾ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಶೂಟ್ ವಿತರಣೆ ಮಾಡಿ ಅವರು ಮಾತನಾಡಿದರು.
ಈ ಹಿಂದೆ ವಿಶೇಷ ಚೇತನ ಮಕ್ಕಳ ಸಂಖ್ಯೆ ಹೆಚ್ಚಿತ್ತು. ಇದೀಗ ಜಾಗೃತಿ ಕಾರ್ಯಕ್ರಮಗಳಿಂದ ಕಡಿಮೆಯಾಗುತ್ತಿದೆ. ವಿಶೇಷ ಚೇತನ ಮಕ್ಕಳನ್ನು ದೇವರ ಮಕ್ಕಳೆಂದು ಭಾವಿಸಬೇಕು. ಆ ಮಕ್ಕಳ ಪ್ರತಿಭೆಗೆ ತಕ್ಕಂತೆ ಅವಕಾಶವನ್ನು ನೀಡಲು ಪೋಷಕರು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಮನೆಯ ವಾತಾವರಣವೇ ಬದಲಾಗುತ್ತದೆ ಎನ್ನುವ ನಿಟ್ಟಿನಲ್ಲಿ ರೀಬಿಲ್ಡ್ ಕೊಡಗು ಸಂಸ್ಥೆ ಕನ್ನಡ ಶಾಲೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಅಲ್ಲದೆ ಈ ಸಮಾಜಕ್ಕೆ ಏನಾದರೂ ಸಹಾಯ ಮಾಡಬೇಕು ಎನ್ನುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು. ಜಿಲ್ಲೆಯಲ್ಲಿ 2018-19ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ರೀಬಿಲ್ಡ್ ಕೊಡಗು ಸಂಸ್ಥೆ ಹುಟ್ಟಿಕೊಂಡಿದ್ದು, ಸಂಸ್ಥೆಯ ಮೂಲಕ ನಿರಂತರವಾಗಿ ಸಮಾಜ ಸೇವೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಂಸ್ಥೆಗೆ ಪ್ರಪಂಚದಾದ್ಯಂತದ ಆತ್ಮೀಯರು ಕೊಡುಗೆ ನೀಡಿದ್ದು, ಇದರಿಂದ ಇಲ್ಲಿಯವರೆಗೆ ನಮ್ಮ ಪ್ರಯಾಣ ಫಲಪ್ರದವಾಗಿದೆ ಮತ್ತು ತೃಪ್ತಿಕರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಕೆ.ಎ.ಕುಶಾಲಪ್ಪ, ನಮ್ಮ ಪ್ರಯತ್ನದಿಂದ ಸಾವಿರಾರು ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಇದೀಗ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. ವಿರಾಜಪೇಟೆಯ ನರ್ಸಿಂಗ್ ಹೋಮ್‍ನಲ್ಲಿ ರೀಬಿಲ್ಡ್ ಸಂಸ್ಥೆಯ ಈಕ್ವಿಪಿಕ್ ಬ್ಯಾಂಕ್ ಇದ್ದು, ವಿಶೇಷ ಚೇತನರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಗತ್ಯ ಇರುವವರು ತಮ್ಮನ್ನು ಸಂಪರ್ಕಿಸಿ ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಹೇಳಿದರು. ಮಡಿಕೇರಿ ಜಿಲ್ಲಾಸ್ಪತ್ರೆಯ ಮನೋತಜ್ಞ ಡಾ.ರಮೇಶ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅತಿಯಾದ ತಂತ್ರಜ್ಞಾನದಿಂದ ನ್ಯೂನತೆಗಳು ಹೆಚ್ಚಾಗುತ್ತಿದ್ದು, ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಪ್ರಮುಖವಾಗಿದೆ. ಅತೀ ಹೆಚ್ಚು ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿನ ತೊಂದರೆಗಳಿಗೆ ಕಾರಣವಾಗಬಹುದು. ಆದ್ದರಿಂದ ಪೋಷಕರ ಅಭ್ಯಾಸಗಳಲ್ಲೂ ಬದಲಾವಣೆಗಳಲಾಗಬೇಕು ಎಂದು ಸಲಹೆ ನೀಡಿದರು. ಬೌದ್ಧಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ಅಸಾಮಥ್ರ್ಯವನ್ನು ಹೊಂದಿರುವ ವಿಶೇಷ ಚೇತನ ಮಕ್ಕಳಿಗೆ ವಿಶೇಷ ಆರೈಕೆಯೊಂದಿಗೆ ಶಿಕ್ಷಣವೂ ಬೇಕು. ಆ ನಿಟ್ಟಿನಲ್ಲಿ ಪೋಷಕರು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಮಕ್ಕಳೊಂದಿಗೆ ಹೆಚ್ಚು ಕಾಲಹರಣ ಮಾಡುವದರ ಮೂಲಕ ಅವರಿಗೆ ಯೋಗ, ಧ್ಯಾನ ಮತ್ತಿತರ ಚಟುವಟಿಕೆಗಳನ್ನು ಮಾಡಿಸಬೇಕು ಹಾಗೂ ಅವರನ್ನು ನಿತ್ಯ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು. ನಗರದ ಜಿಲ್ಲಾಸ್ಪತ್ರೆಯ ಕೊಠಡಿ ಸಂಖ್ಯೆ 11 ರಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ವಿಶೇಷ ಮಕ್ಕಳ ಸಮಾಲೋಚನೆ ನಡೆಯಲಿದ್ದು, ಅಗತ್ಯ ಇರುವವರು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಡಾ.ರಮೇಶ್ ತಿಳಿಸಿದರು. ಮಡಿಕೇರಿ ಇನ್ನರ್‍ವಿಲ್ ಕ್ಲಬ್‍ನ ಅಧ್ಯಕ್ಷೆ ಎಗ್ನಿಸ್ ಮುತ್ತಣ್ಣ ಮಾತನಾಡಿ, ವಿಶೇಷ ಮಕ್ಕಳಿಗೆ ಸಹಕಾರಿಯಾಗಲೆಂದು ಮಡಿಕೇರಿಯ ಇನ್ನರ್‍ವಿಲ್ ಕ್ಲಬ್ ವತಿಯಿಂದ ಶಾಲಾ ಸಿದ್ಧತಾ ಕೇಂದ್ರಕ್ಕೆ ಅಗತ್ಯ ಸಲಕರಣೆಗಳನ್ನು ನೀಡಲಾಗಿದೆ ಎಂದು ಹೇಳಿದರು. ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‍ನ ಸುನಿತಾ ಮಾತನಾಡಿ, ಯೂತ್ ಮೂಮೆಂಟ್‍ನಿಂದ ಲಭ್ಯವಾಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ರಂಗಧಾಮಪ್ಪ, ಬಿಇಓ ಡಾ.ದೊಡ್ಡೆಗೌಡ, ಶಾಲಾ ಶಿಕ್ಷಣಾ ಇಲಾಖೆಯ ಡಿವೈಪಿಸಿ ಸೌಮ್ಯ ಪೊನ್ನಪ್ಪ, ಕೃಷ್ಣಪ್ಪ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಶಾಲಾ ಸಿದ್ದತಾ ಕೇಂದ್ರದ ಅಧಿಕಾರಿ ದಿವ್ಯ ಹಾಗೂ ಸಿಬ್ಬಂದಿಗಳು, ಮಕ್ಕಳ ಪೋಷಕರು ಹಾಜರಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರೋಗ್ರಾಮನರ್ ಪ್ರಸಾದ್ ನಿರೂಪಿಸಿದರು. ರೀಬಿಲ್ಡ್ ಕೊಡಗು ಸಂಸ್ಥೆ ವತಿಯಿಂದ ವಿಶೇಷ ಚೇತನ ವಿದ್ಯಾರ್ಥಿಗಳಿಗೆ 95 ಟ್ರ್ಯಾಕ್ ಶೂಟ್ ಗಳನ್ನು ವಿತರಣೆ ಮಾಡಲಾಯಿತು. ಮಡಿಕೇರಿ ಇನ್ನರ್ ವಿಲ್ ಕ್ಲಬ್ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.