ಮಡಿಕೇರಿ ಡಿ.17 NEWS DESK : ಕೊಡಗು ಜಿಲ್ಲಾ ಸರಕಾರಿ ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಮೂಲ ಸೌಕರ್ಯ ಮತ್ತು ಬೇಡಿಕೆಗಳ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಸಭೆ ನಡೆಸಿದರು. ಬೆಳಗಾವಿ ವಿಧಾನಸೌಧದ ಸಚಿವರ ಕೊಠಡಿಯಲ್ಲಿ ಸಭೆ ನಡೆಸಿದ ಸಚಿವರು ಹಾಗೂ ಶಾಸಕರು ಕೊಡಗು ಜಿಲ್ಲೆಯ ಅನುದಾನಿತ ಶಾಲಾ- ಕಾಲೇಜುಗಳ ನೌಕರರ ಸಂಘ ಸರಕಾರದ ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಅನುದಾನಿತ ಕಾಲೇಜು ತರಬೇತಿವಾರು ಕನಿಷ್ಠ 40 ವಿದ್ಯಾರ್ಥಿಗಳನ್ನು ನಿಗದಿಪಡಿಸಲಾಗಿದೆ. ಆದರೆ ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಕನಿಷ್ಠ 40 ವಿದ್ಯಾರ್ಥಿಗಳ ಸಂಖ್ಯೆಯನ್ನು 20 ವಿದ್ಯಾರ್ಥಿಗಳಿಗೆ ಇಳಿಸಬೇಕು, ಉಪನ್ಯಾಸಕರ ವೇತನವನ್ನು ತಡೆಹಿಡಿಯದೆ ಪಾವತಿಸಬೇಕು. ಪ್ರಜಾ ಪ್ರತಿನಿಧಿ ಕಾಯ್ದೆಯ ತಿದ್ದುಪಡಿಯನ್ವಯ ಕೊಡಗು ಮತ್ತು ಮಲೆನಾಡು ಜಿಲ್ಲೆಗಳನ್ನು ವಿಶೇಷವಾಗಿ ಪರಿಗಣಿಸಬೇಕು. ರಾಜ್ಯದ ಶಾಲಾ ಕಾಲೇಜುಗಳಲ್ಲಿ ಕೊಡವ ಜಾತಿಯನ್ನು ಕೊಡವ ಎಂದು ನಮೂದಿಸಿ ಅಧಿಸೂಚನೆ ಹೊರಡಿಸುವುದು. ಜಿಲ್ಲೆಯ ಸಾಂಧೀಪನಿ ವಿದ್ಯಾಪೀಠ ಶಾಲೆಯ ಸಮಸ್ಯೆಗಳನ್ನು ಬಗೆಹರಿಸಬೇಕು. ಮಡಿಕೇರಿ ತಾಲ್ಲೂಕು ಮೆಕೇರಿ ಗ್ರಾಮದಲ್ಲಿ ಸರಕಾರಿ ಶಾಲೆ ನಿರ್ಮಾಣ ಮತ್ತು ಜಾಗವನ್ನು ಪಂಚಾಯತ್ ಹೆಸರಿಗೆ ಮಂಜೂರು ಮಾಡಬೇಕು. ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಮೂಲಸೌಕರ್ಯದೊಂದಿಗೆ ಅನುದಾನ ನೀಡಬೇಕು. ಮಡಿಕೇರಿ ತಾಲ್ಲೂಕು ಕೊಯನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣದ ಯೋಜನೆಯನ್ನು ವಿಶೇಷವಾಗಿ ಪರಿಗಣಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಎ.ಎಸ್.ಪೊನ್ನಣ್ಣ ಸಚಿವರಲ್ಲಿ ಮನವಿ ಮಾಡಿದರು. ಕೊಡಗಿಗೆ ವಿಶೇಷ ಆದ್ಯತೆ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಮಧು ಬಂಗಾರಪ್ಪ ಭರವಸೆ ನೀಡಿದರು. ಈ ಸಂದರ್ಭ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.