ಮಡಿಕೇರಿ ಡಿ.17 NEWS DESK : ಮಕ್ಕಳಿಗೆ ಮಾನವೀಯ ಹಾಗೂ ಮೌಲ್ಯಯುತ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಪ್ರತಿಪಾದಿಸಿದ್ದಾರೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಆರ್‍ಟಿಇ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಬಗ್ಗೆ ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ‘ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ’ ಕುರಿತು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಮಕ್ಕಳ ಜೀವನದ ಪರಿಪೂರ್ಣ ಬೆಳವಣಿಗೆಗೆ ಮೌಲ್ಯಯುತ ಶಿಕ್ಷಣ ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಅವರು ಸಲಹೆ ನೀಡಿದರು. ಮಕ್ಕಳ ಹಕ್ಕುಗಳ ಕುರಿತು ಸಾಕಷ್ಟು ಕಾನೂನುಗಳು, ಕಾಯ್ದೆಗಳು ಇದ್ದರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ, ದೌರ್ಜನ್ಯಗಳು ನಡೆಯುತ್ತಿದ್ದು, ಇದನ್ನು ತಡೆಯಬೇಕು ಎಂದರು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡುವಂತಾಗಬೇಕು. ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗದಂತೆ ನಿಗಾವಹಿಸಬೇಕು. ಹೆಣ್ಣು ಮಕ್ಕಳ ಬಾಲ್ಯ ವಿವಾಹ ತಪ್ಪಿಸಲು ಹತ್ತಿರದಲ್ಲಿಯೇ ಶಾಲಾ ಕಾಲೇಜುಗಳು ಇರಬೇಕು. ಇಲ್ಲದಿದ್ದಲ್ಲಿ ಸಾರಿಗೆ ಸಂಪರ್ಕವಾದರೂ ಸಮಪರ್ಕವಾಗಿರಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಸಾರಿಗೆ ಸಂಪರ್ಕ ಇಲ್ಲದೆ ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ಇಂದಿಗೂ ಸಹ ಕಾಣುತ್ತೇವೆ. ಕೆಲವು ಕಡೆಗಳಲ್ಲಿ ವಿದ್ಯಾರ್ಥಿ ನಿಲಯ ಸೇರಲು ಹಿಂಜರಿಕೆ ಪಡುತ್ತಾರೆ. ಆದ್ದರಿಂದ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಬಲಪಡಿಸಬೇಕು ಎಂದರು. ಮಕ್ಕಳ ಶಿಕ್ಷಣ ಕುಂಠಿತವಾಗದಂತೆ ನೋಡಿಕೊಳ್ಳುವುದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ, ಮಾರ್ಗದರ್ಶನ ನೀಡುವಂತಾಗಬೇಕು. ಶಿಕ್ಷಣ ಹಕ್ಕು ಕಾಯ್ದೆ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ವೆಂಕಟೇಶ್ ಹೇಳಿದರು. ಡಯಟ್ ಪ್ರಾಂಶುಪಾಲರಾದ ಎಂ.ಚಂದ್ರಕಾಂತ್ ಅವರು ಮಾತನಾಡಿ ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಶಿಶುವಿಹಾರ, ಅಂಗನವಾಡಿ, ಮಧ್ಯಾಹ್ನದ ಬಿಸಿ ಊಟ, ಹಾಲು ವಿತರಣೆ, ಬೈಸಿಕಲ್ ವಿತರಣೆ, ಎಲ್ಲಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅವಕಾಶ, ಹೀಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಬಳಸಿಕೊಂಡು ಶಿಕ್ಷಣ ಪಡೆಯಲು ಮುಂದಾಗಬೇಕು ಎಂದರು. ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿದ್ದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗುತ್ತಾರೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದಲ್ಲೇ ಸರಿಯಾದ ಮಾರ್ಗದರ್ಶನ ನೀಡಿದರೆ ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗದಂತೆ ತಡೆಯಬಹುದಾಗಿದೆ ಎಂದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಈರಸ್ವಾಮಿ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಅತೀ ಮುಖ್ಯವಾಗಿದೆ. ಶಿಕ್ಷಣದಿಂದ ಮಾತ್ರ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮಕ್ಕಳು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಬೇಕು. ಮಕ್ಕಳ ಮೇಲೆ ದೌರ್ಜನ್ಯ ನಡೆಯಬಾರದು. ಮಕ್ಕಳಿಗೆ ಶಿಕ್ಷಣ, ವಸತಿ ಸೌಲಭ್ಯಗಳಿದ್ದು, ಅದನ್ನು ಬಳಸಿಕೊಳ್ಳುವಂತಾಗಬೇಕು ಎಂದರು. ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಆರ್‍ಎಂಎಸ್‍ಎ ಸೌಮ್ಯ ಪೊನ್ನಪ್ಪ ಅವರು ಮಾತನಾಡಿ ಮಕ್ಕಳಲ್ಲಿ ಹೆದರಿಕೆ, ಸಂಕೋಚ ಮನೋಭಾವ ಇರುತ್ತದೆ. ಆದ್ದರಿಂದ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದರು. ಡಿವೈಪಿಸಿ ಎಸ್‍ಎಸ್‍ಕೆ ಎಂ.ಕೃಷ್ಣಪ್ಪ, ಸುಮತಿ ಅವರು ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದೊಡ್ಡೇಗೌಡ, ಭಾಗ್ಯಮ್ಮ, ರವಿ,ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ಬಿಆರ್‍ಸಿ, ಸಿಆರ್‍ಪಿ ಇತರರು ಇದ್ದರು.
ವಿದ್ಯಾರ್ಥಿಗಳೊಂದಿಗೆ ಸಂವಾದ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಕ್ಕಳ ಹಕ್ಕುಗಳ ರಕ್ಷಣಾ ಘಟಕ, ಪೊಲೀಸ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಗ್ರ ಗಿರಿಜನ ಅಭಿವೃದ್ಧಿ ಹೀಗೆ ವಿವಿಧ ಇಲಾಖೆಗಳ ಸಹಕಾರದಲ್ಲಿ ನಗರದ ಸಂತ ಮೈಕಲರ ಶಾಲೆ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ‘ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಮಕ್ಕಳ ಶಿಕ್ಷಣದ ಜೊತೆಗೆ ರಕ್ಷಣೆ ಕುರಿತು ಸಂವಾದ’ ಕಾರ್ಯಕ್ರಮವು ನಡೆಯಿತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಡಿವೈಎಸ್‍ಪಿ ಮಹೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜ, ಐಟಿಡಿಪಿ ಇಲಾಖೆಯ ಅಧಿಕಾರಿ ಎಸ್.ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಸೌಮ್ಯ ಪೊನ್ನಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಮೋಹನ್ ಕುಮಾರ್, ವ್ಯವಸ್ಥಾಪಕರಾದ ಶಿವಶಂಕರ, ಗುರುರಾಜ್ ಇತರರು ಪಾಲ್ಗೊಂಡಿದ್ದರು. ಸಂವಾದ ಕಾರ್ಯಕ್ರಮದಲ್ಲಿ ನಗರದ ಸರ್ಕಾರಿ ಪ್ರೌಢಶಾಲೆ, ಸಂತ ಮೈಕಲರ, ಸಂತ ಜೋಸೆಫರ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಕೇಂದ್ರೀಯ ವಿದ್ಯಾಲಯ, ಕೊಡಗು ವಿದ್ಯಾಲಯ ಸೇರಿದಂತೆ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರು. ಶಿಕ್ಷಣ ಹಕ್ಕು ಕಾಯ್ದೆ ಪರಿಣಾಮಕಾರಿ ಜಾರಿ, ಬಾಲ್ಯ ವಿವಾಹ ತಡೆ, ಹೆಣ್ಣು ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ, ಮುಷ್ಕರ/ಪ್ರತಿಭಟನಾ ಸಂದರ್ಭದಲ್ಲಿ ಸುಗಮ ಸಾರಿಗೆ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ನೋಡಿಕೊಳ್ಳುವುದು. ಆನ್‍ಲೈನ್ ಮೋಸ/ ವಂಚನೆಗೆ ತುತ್ತಾಗದಂತೆ ಗಮನಹರಿಸುವುದು. ಎಲ್ಲಾ ಹೆಣ್ಣು ಮಕ್ಕಳಿಗೆ ವಸತಿ ಶಾಲೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು ಹೀಗೆ ಹಲವು ವಿಚಾರಗಳನ್ನು ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಂವಾದದಲ್ಲಿ ಪ್ರಶ್ನೆಗಳ ಸುರಿಮಳೆ ಗೈದರು. ಈ ಬಗ್ಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ ಸರ್ಕಾರಿ ಸಂಸ್ಥೆಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ವರೆಗೂ ಉಚಿತ ಶಿಕ್ಷಣವಿದ್ದು, ಅದನ್ನು ಬಳಸಿಕೊಳ್ಳುವಂತಾಗಬೇಕು ಎಂದರು. ಆನ್‍ಲೈನ್ ಮೋಸಕ್ಕೆ ತುತ್ತಾಗಬಾರದು. ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದೆ ತಮ್ಮ ಸುರಕ್ಷತೆಗೆ ಗಮನಹರಿಸುವುದು ಅತ್ಯಗತ್ಯ ಎಂದು ಒತ್ತು ಹೇಳಿದರು. ಮಕ್ಕಳು ದೇವರಿಗೆ ಸಮಾನ, ಆದ್ದರಿಂದ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ವೆಂಕಟೇಶ್ ಅವರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್‍ಪಿ ಮಹೇಶ್ ಕುಮಾರ್ ಅವರು ಮೊಬೈಲ್ ಬಳಕೆಯಿಂದ ಒಳಿತು ಕೆಡುಕು ಎರಡು ಇದ್ದು, ಈ ಬಗ್ಗೆ ಎಚ್ಚರ ವಹಿಸಬೇಕು. ಆದರೂ ಮೋಸ, ವಂಚನೆಗೆ ತುತ್ತಾದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತಾಗಬೇಕು ಸಲಹೆ ನೀಡಿದರು.