ಕುಶಾಲನಗರ, ಡಿ.19 NEWS DESK : ಸ್ವಚ್ಛ ಭಾರತ ಅಭಿಯಾನದ ಯೋಜನೆಯಡಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕುಶಾಲನಗರ
ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರಕಾರಿ ಪ್ರೌಢಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಶಾಲನಗರ ತಾಲ್ಲೂಕು ಸ್ಥಳೀಯ ಸಂಸ್ಥೆ ಹಾಗೂ ಕೂಡುಮಂಗಳೂರು ಗ್ರಾ.ಪಂ ಸಹಕಾರದಿಂದ ಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ-ಕ್ಲಬ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.) ವತಿಯಿಂದ ಸ್ವಚ್ಛ ಭಾರತ ಅಭಿಯಾನದ ಯೋಜನೆಯಡಿ ಹಾಗೂ ಆರೋಗ್ಯ ಮತ್ತು ಶುಚಿತ್ವ ಕಾರ್ಯಕ್ರಮದಡಿಯಲ್ಲಿ
ಶೌಚಾಲಯಗಳು- ಶಾಂತಿಗಾಗಿ ಒಂದು ಸ್ಥಳ- ಎಂಬ ಧ್ಯೇಯ ವಾಕ್ಯ (ಥೀಮ್) ದೊಂದಿಗೆ ವಿಶ್ವ ಶೌಚಾಲಯ ದಿನ:2024 ರ ಅಂಗವಾಗಿ
“ನಮ್ಮ ಶೌಚಾಲಯ ನಮ್ಮ ಗೌರವ”ಎಂಬ ಧ್ಯೇಯದಡಿ ಸ್ವಚ್ಛತಾ ಜಾಗೃತಿ ನಡೆಯಿತು. ಸ್ವಚ್ಛ ಭಾರತ ಮಿಷನ್ ಗ್ರಾಮೀಣ, ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಕುಶಾಲನಗರ, ತಾಲೂಕು ಪಂಚಾಯಿತಿಯ ಜನಜಾಗೃತಿ ಕಾರ್ಯಕ್ರಮದಡಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಶೌಚಗೃಹ ಸ್ವಚ್ಛಗೊಳಿಸುವ ಜಾಗೃತಿ ಮೂಡಿಸಿದರು.
ಕೂಡ್ಲೂರು ಗ್ರಾಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜತೆಗೂಡಿ ಜಾಗೃತಿ ಜಾಥಾ ನಡೆಸಿ ಸ್ವಚ್ಛ ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸಿದರು.
ಶೌಚಾಲಯದ ಬಳಕೆ ಮತ್ತು ಸ್ವಚ್ಛತೆ ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯ ಶಿಕ್ಷಕ ಹಾಗೂ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಟಿ.ಜಿ.ಪ್ರೇಮಕುಮಾರ್, ವಿದ್ಯಾರ್ಥಿಗಳಿಗೆ ಶೌಚಾಲಯವನ್ನು ನಾವು ಪ್ರತಿನಿತ್ಯ ಬಳಸುವ ಶೌಚಾಲಯವನ್ನು ಹೇಗೆ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಮತ್ತು ಸಮುದಾಯದಲ್ಲಿ ಶೌಚಾಲಯ ಬಳಕೆಯ ಬಗ್ಗೆ ಹೇಗೆ ಜಾಗೃತಿ ಮೂಡಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು. “ನೈರ್ಮಲ್ಯದೆಡೆಗೆ ನಮ್ಮ ನಡಿಗೆ*” ಎಂಬ ಘೋಷವಾಕ್ಯದ ಮೂಲಕ ನಾವು ಶೌಚಾಲಯ ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಬೇಕು. ಹಳ್ಳಿಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವ ದಿಸೆಯಲ್ಲಿ ಬಯಲು ಶೌಚಾಲಯ ಬಳಕೆಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಣ ತೊಡಬೇಕು ಎಂದರು.
ಈ ಬಾರಿ ನ.19 ರಿಂದ ಡಿ.10 ರವರೆಗೆ “ನಮ್ಮ ಶೌಚಾಲಯ ನಮ್ಮ ಗೌರವ” ಎಂಬ ವಿಶೇಷ ಆಂದೋಲನದ ಅಂಗವಾಗಿ ಗ್ರಾಮೀಣ ಸಮುದಾಯದಲ್ಲಿ ಆರೋಗ್ಯ, ನೈರ್ಮಲ್ಯ ಹಾಗೂ ಶುಚಿತ್ವ ಕುರಿತು ಜಾಗೃತಿ ಮೂಡಿಸಿ ಶೌಚಾಲಯಗಳನ್ನು ನಿರಂತರ ಬಳಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಪ್ರತಿವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಾಚರಣೆಯು ಬಯಲು ಬಹಿರ್ದಸೆ ಮುಕ್ತ ಸ್ಥಿತಿಯ ಸ್ಥಾನಮಾನ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಟಿ.ಜಿ.ಪ್ರೇಮಕುಮಾರ್ ತಿಳಿಸಿದರು. ವಿಶ್ವ ಶೌಚಾಲಯ ಪ್ರಯುಕ್ತ ಪ್ರಸ್ತುತ ವರ್ಷ “ನಮ್ಮ ಶೌಚಾಲಯ ನಮ್ಮ ಗೌರವ” ಎಂಬ ಶೀರ್ಷಿಕೆ ಹಾಗೂ *ಅಂದದ ಶೌಚಾಲಯ ಆನಂದದ ಜೀವನ” ಎಂಬ ಘೋಷ ವಾಕ್ಯದೊಂದಿಗೆ ವಿಶೇಷ ಆಂದೋಲನ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಶೌಚಾಲಯ ಸ್ವಚ್ಛತೆಯ ಮಹತ್ವ ಕುರಿತು ಮಾಹಿತಿ ನೀಡಿದ ಶಾಲೆಯ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ವಿದ್ಯಾರ್ಥಿಗಳು ತಾವು ಬಳಸುವ ಶೌಚಾಲಯದ ಸ್ವಚ್ಛತೆ ಜತೆಗೆ ತಮ್ಮ ವೈಯಕ್ತಿಕ ಸ್ವಚ್ಛತೆ ಹಾಗೂ ಜನಸಮುದಾಯದಲ್ಲಿ ಆರೋಗ್ಯ, ನೈರ್ಮಲ್ಯ ಹಾಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು. ಉತ್ತಮ ನೈರ್ಮಲ್ಯ ವ್ಯವಸ್ಥೆ ಇದ್ದಲ್ಲಿ ಮಾತ್ರ ಉತ್ತಮ ಆರೋಗ್ಯವೂ ಇರುತ್ತದೆ ಎಂದು ತಿಳಿಸಿದರು. ಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಎನ್.ಸುಜಾತ, ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ, ಸಿಬ್ಬಂದಿ ಎಂ.ಉಷಾ, ಶಾಲಾ ನಾಯಕಿ ಸ್ಪಂದನ, ಉಪ ನಾಯಕ ಎಂ.ಗೌತಮ್, ವಿದ್ಯಾರ್ಥಿಗಳು ಇದ್ದರು. ವಿಶ್ವ ಶೌಚಾಲಯ ದಿನದ ಅಂಗವಾಗಿ ಕೂಡ್ಲೂರು ಗ್ರಾಮದಲ್ಲಿ ನಮ್ಮ ಶೌಚಾಲಯ, ನಮ್ಮ ಗೌರವ ಕುರಿತಂತೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಸ್ವಚ್ಛ ಶಾಲೆ ಸ್ವಚ್ಛ ಶೌಚಾಲಯ ಎಂಬಿತ್ಯಾದಿ ಘೋಷಣೆಗಳನ್ನು ಪ್ರಚುರಪಡಿಸಿದರು.