ಮಡಿಕೇರಿ ಡಿ.19 NEWS DESK : ಗಾಳಿಬೀಡು ರಸ್ತೆ ಡಾಂಬರೀಕರಣಕ್ಕಾಗಿ ಒತ್ತಾಯಿಸಿ ಗ್ರಾಮಸ್ಥರ ಹೆಸರಿನಲ್ಲಿ ನಡೆಸಿದ ಪ್ರತಿಭಟನೆ ಬಿಜೆಪಿಯ ಕೃಪಾಪೋಷಿತ ಪ್ರತಿಭಟನೆಯಾಗಿದೆ ಎಂದು ಗಾಳಿಬೀಡು ವಲಯ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಆಳ್ವ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗ್ರಾಮದ ರಸ್ತೆ ಕಳೆದ 20 ವರ್ಷಗಳಿಂದ ಸಂಪೂರ್ಣ ಡಾಂಬರೀಕರಣಗೊಂಡಿಲ್ಲ, ಅಂದಿನಿಂದ ಇಂದಿನವರೆಗೆ ರಸ್ತೆಗೆ ತೇಪೆ ಹಾಕುವ ಕಾರ್ಯವೇ ಮುಂದುವರಿದುಕೊಂಡು ಬಂದಿದೆ. ಈ ಹಿಂದೆ ನಡೆದ ತೇಪೆ ಕಾರ್ಯವನ್ನು ವಿರೋಧಿಸದೇ ಇದ್ದ ಬಿಜೆಪಿ ಸದಸ್ಯರು ಇಂದು ಆಡಳಿತ ವ್ಯವಸ್ಥೆ ಬದಲಾಗಿರುವುದನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಸ್ವಾರ್ಥ ರಾಜಕಾರಣಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮಸ್ಥರ ಹೆಸರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ ಎನ್ನುವ ಮಾಹಿತಿ ಇದ್ದ ಕಾರಣದಿಂದ ಗ್ರಾಮಸ್ಥರಿಂದ ದೊಡ್ಡ ಬೆಂಬಲ ದೊರೆತ್ತಿಲ್ಲವೆಂದು ತಿಳಿಸಿದ್ದಾರೆ. ಈ ಹಿಂದೆ ಬಿಜೆಪಿ ಶಾಸಕರು ಇದ್ದ ಸಂದರ್ಭದಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಕರೆ ನೀಡಿದಾಗ ಬೆಂಬಲಿಸದೇ ಇದ್ದ ಪ್ರಮುಖರು, ಇಂದು ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ನಡೆಸಿದ್ದಾರೆ. 2008ನೇ ಇಸವಿಯಲ್ಲಿ ಬಿಜೆಪಿ ಮಂದಿ ಕಾನೂನಿಗೆ ವಿರುದ್ಧವಾಗಿ ಮಡಿಕೇರಿ-ಗಾಳಿಬೀಡು-ಕಡಮಕಲ್ಲು-ಸುಬ್ರಹ್ಮಣ್ಯ ರಸ್ತೆಗಾಗಿ ಪ್ರತಿಭಟನೆ ನಡೆಸಿ ಇದೀಗ ರಸ್ತೆ ಮುಚ್ಚಿರುವುದನ್ನು ಗಮನಿಸಬಹುದು. ಈ ಕಾರಣದಿಂದ ರಸ್ತೆಗೆ ಬರುವ ಅನುದಾನವೂ ಕಡಿತಗೊಂಡಿದೆ. ಕಾನೂನಾತ್ಮಕ ಹೋರಾಟದಲ್ಲಿ ಮುಂದುವರೆದಿದ್ದರೆ ಇಂದು ಸಾರ್ವಜನಿಕವಾಗಿ ರಸ್ತೆ ಸಂಚಾರಕ್ಕೆ ಮುಕ್ತವಾಗಿರುತ್ತಿತ್ತು ಎಂದು ಆರೋಪಿಸಿದ್ದಾರೆ. ಮಡಿಕೇರಿಯ ಶಾಸಕ ಡಾ.ಮಂತರ್ ಗೌಡ ಅವರು ಮಡಿಕೇರಿ-ಗಾಳಿಬೀಡು ಗ್ರಾಮದ ರಸ್ತೆಗಾಗಿ ಮೀಸಲಿಟ್ಟಿದ್ದ 2.5ಕೋಟಿ ಹಣವನ್ನು 3.5 ಕೋಟಿಗೆ ಏರಿಕೆ ಮಾಡಿ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಅನುಮೋದನೆ ಪಡೆಯುವ ಭರವಸೆಯನ್ನೂ ಶಾಸಕರು ನೀಡಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ ಅನೇಕ ಸಂದರ್ಭಗಳಲ್ಲಿ ಈ ವಿಚಾರವನ್ನು ಶಾಸಕರು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗ್ರಾಮಸ್ಥರಿಗೂ ಈ ಬಗ್ಗೆ ಮಾಹಿತಿ ಇದೆ. ಆದರೆ ಬಿಜೆಪಿ ಮಂದಿ ಇರುವ ವಾಸ್ತವ ವಿಚಾರವನ್ನು ತಿರುಚಿ ಗ್ರಾಮಸ್ಥರ ಭಾವನೆಯ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ಹಿಂದಿನ ಬಿಜೆಪಿ ಸರಕಾರದ ಅವಧಿಯ ವೈಫಲ್ಯವನ್ನು ಮುಚ್ಚಿ ಹಾಕುವ ಸಂಚು ಇದಾಗಿದೆ ಎಂದು ಸುಭಾಷ್ ಆಳ್ವ ಆರೋಪಿಸಿದ್ದಾರೆ. ಡಾ.ಮಂತರ್ ಗೌಡ ಅವರು ಶಾಸಕರಾದ ನಂತರ ಇಲ್ಲಿಯವರೆಗೆ ಅಂದಾಜು 70ಲಕ್ಷದ ರೂ. ಅನುದಾನ ದೊರಕಿದೆ. ಗ್ರಾಮ ಪಂಚಾಯತ್ ಗೆ ಸರಕಾರದಿಂದ ಬಂದಿರುವ ಅನುದಾನದ ಹೊರತಾಗಿಯೂ ಅಂದಾಜು 70ಲಕ್ಷದ ಕಾಮಗಾರಿ ನಡೆದಿರುವುದು ಶ್ಲಾಘನೀಯ. ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಸಂಪರ್ಕ ಕಡಿತಗೊಳ್ಳುತ್ತಿದ್ದ ಅನೇಕ ರಸ್ತೆಗಳು ಇಂದು ಕಾಯಕಲ್ಪ ಪಡೆದುಕೊಳ್ಳುತ್ತಿವೆ. ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ಶಾಸಕರ ಮೇಲೆ ಗ್ರಾಮದ ಜನರಿಗೆ ಅಪಾರ ವಿಶ್ವಾಸವಿದೆ. ವಿಶ್ವಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ಮುಂದೆಯೂ ಕಾರ್ಯನಿರ್ವಹಿಸಲಿದ್ದಾರೆ ಎನ್ನುವ ನಂಬಿಕೆ ಗ್ರಾಮಸ್ಥರಲ್ಲಿದೆ. ರಸ್ತೆ ಕಾಮಗಾರಿಗಾಗಿ ಅನುಮೋದನೆಗೆಂದು ಸಲ್ಲಿಸಿರುವ 3.5 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿಸಿಕೊಡುವಂತೆ ಗಾಳಿಬೀಡು ವಲಯ ಕಾಂಗ್ರೆಸ್ ಸಮಿತಿ ಶಾಸಕರಲ್ಲಿ ಮನವಿ ಮಾಡಿಕೊಳ್ಳಲಿದೆ ಮತ್ತು ಗ್ರಾಮಗಳ ಅಭಿವೃದ್ಧಿಗಾಗಿ ಅವಿರತ ಶ್ರಮವಹಿಸಲಿದೆ ಎಂದು ತಿಳಿಸಿದ್ದಾರೆ.