ಮಡಿಕೇರಿ ಡಿ.26 NEWS DESK : ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಆರಾಧಿಸುವ ಯೇಸುಕ್ರಿಸ್ತರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ್ದು, ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮತ್ತು ಅಸೋಸಿಯೇಷನ್ ನ ಘಟಕಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿವೆ. ಮಡಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮಾತನಾಡಿದ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ಅವರು ಯೇಸುಕ್ರಿಸ್ತರನ್ನು ಅವಹೇಳನ ಮಾಡಿ ಕ್ರೈಸ್ತ ಸಮುದಾಯದ ಭಾವನೆಗೆ ದಕ್ಕೆ ತಂದಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ಕಳೆದ ಸಾವಿರಾರು ವರ್ಷಗಳಿಂದ ಶಾಂತಿಧೂತ ಯೇಸುಕ್ರಿಸ್ತರ ಜನ್ಮ ದಿನದಂದು ಕ್ರಿಸ್‍ಮಸ್ ಹಬ್ಬವನ್ನು ವಿಶ್ವದೆಲ್ಲೆಡೆ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಕಿಡಿಗೇಡಿಯೊಬ್ಬ ಕ್ರಿಸ್‍ಮಸ್ ಹಬ್ಬದ ಕುರಿತು ಅಗೌರವದ ಪೋಸ್ಟ್ ಮಾಡಿರುವುದಲ್ಲದೆ ಯೇಸುಕ್ರಿಸ್ತರನ್ನು ಕೀಳಾಗಿ ಕಂಡಿದ್ದಾನೆ. ಈತನ ಹೇಳಿಕೆಗೆ ಬೆಂಬಲವಾಗಿ ಮತ್ತೊಬ್ಬ ಕಿಡಿಗೇಡಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದಾನೆ. ಇದು ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನವಾಗಿದ್ದು, ಪೊಲೀಸರು ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಿಡಿಗೇಡಿಗಳ ಬಂಧನವಾಗದಿದ್ದಲ್ಲಿ ಕ್ರೈಸ್ತರು ಒಗ್ಗೂಡಿ ಜಿಲ್ಲೆಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಅಸೋಸಿಯೇಷನ್ ನ ಮಡಿಕೇರಿ, ಕುಶಾಲನಗರ, ವಿರಾಜಪೇಟೆ ಮತ್ತು ಸೋಮವಾರಪೇಟೆ ಘಟಕಗಳು ಆಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಠಿಣ ಕ್ರಮಕ್ಕಾಗಿ ಒತ್ತಾಯಿಸಿವೆ.