ಮಡಿಕೇರಿ ಡಿ.27 NEWS DESK : ಕ್ರೀಡಾಕೂಟಗಳಿಂದ ನಾಯಕತ್ವ ಗುಣದೊಂದಿಗೆ ಪರಸ್ಪರ ಸಹೋದರತೆ ಬೆಳೆಯುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ಹೇಳಿದರು. ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಳೆದ ಮೂರು ದಿನಗಳಿಂದ ನಡೆದ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಮಾಜದ ಆರೋಗ್ಯ ಕಾಪಾಡುವುದು ಕಾನೂನಿನ ಉದ್ದೇಶವಾಗಿರುತ್ತದೆ. ಕಾನೂನು ಕಾಪಾಡುತ್ತಲೇ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಕಡೆ ಗಮನ ಹರಿಸುವುದು ಪೊಲೀಸರಿಗೆ ಕಷ್ಟಕರ. ಇಂತಹ ಕಾರ್ಯಕ್ರಮಗಳು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಕ್ರೀಡಾಕೂಟಗಳಿಂದ ನಾಯಕತ್ವದ ಬೆಳವಣಿಗೆಯೊಂದಿಗೆ ಸಹೋದರತೆ ಭಾವನೆ ಬೆಳೆಯುತ್ತದೆ. ಎಲ್ಲರೂ ಒಂದೇ ಕುಟುಂಬದಂತೆ ಕೆಲಸ ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪ್ರತಿವರ್ಷ ಕ್ರೀಡಾಕೂಟ ಹಮ್ಮಿಕೊಂಡು ಬರಲಾಗುತ್ತಿದ್ದು, ಇದರಿಂದಾಗಿ ಒಂದು ತಂಡ ರಚನೆಯೊಂದಿಗೆ ಎಲ್ಲರೂ ಒಂದೇ ಕುಟುಂಬ ಎಂಬಂತೆ ಬೆರೆಯಲು ಸಾಧ್ಯವಾಗುತ್ತದೆ. ದೈಹಿಕ ಶಕ್ತಿ ವೃದ್ಧಿಯೊಂದಿಗೆ ಇತರರಿಗೂ ಮಾದರಿಯಾಗಿ ಎಲ್ಲರೂ ಪಾಲ್ಗೊಳ್ಳಬೇಕು ಎಂಬ ಆಸಕ್ತಿ ಮೂಡಿಸುತ್ತದೆ ಎಂದರು. ಒತ್ತಡದ ಕೆಲಸದಲ್ಲಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಎಂದಿಗೂ ಒಂದಾಗಿ ಬೆರೆಯಲು ಸಾಧ್ಯವೇ ಆಗುವುದಿಲ್ಲ. ಎಲ್ಲರೂ ಪ್ರತಿನಿತ್ಯ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗಿಗಳಾಗುತ್ತಾರೆ. ಹಾಗಾಗಿ ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವ ಮೂಲಕ ಎಲ್ಲರೂ ಒಂದಾಗಿ ಬೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಸೋಲು-ಗೆಲುವು ಜೀವನದ ಒಂದು ಭಾಗವಾಗಿದ್ದು, ಪೊಲೀಸರಿಗೆ ಸಮಸ್ಯೆ ಎದುರಾದಾಗ ಎಲ್ಲರೂ ಒಂದಾಗಬೇಕು. ಕುಟುಂಬದ ರೀತಿಯಲ್ಲಿ ಬೇರೆಯಬೇಕೆಂದು ಕಿವಿಮಾತು ಹೇಳಿದರು. ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರರಾಜ್, ಪ್ರೊಬೇಷನರಿ ವರಿಷ್ಠಾಧಿಕಾರಿ ಡಾ.ಬೆನಕ ಪ್ರಸಾದ್, ಡಿವೈಎಸ್‍ಪಿಗಳಾದ ಮಹೇಶ್ ಕುಮಾರ್, ಮೋಹನ್ ಕುಮಾರ್, ಗಂಗಾಧರಪ್ಪ, ರವಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.