ಮಡಿಕೇರಿ ಡಿ.28 NEWS DESK : ಮರಗೋಡಿನ ಕಟ್ಟೆಮಾಡು ಶ್ರೀಮಹಾ ಮೃತ್ಯುಂಜಯ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಕೊಡವ ಸಾಂಪ್ರದಾಯಿಕ ಕುಪ್ಯಚೇಲೆಯನ್ನು ಧರಿಸಿ ದೇವರ ದರ್ಶನ ಪಡೆಯುತ್ತಿದ್ದ ಕೊಡವರನ್ನು ಅವಮಾನಿಸಲಾಗಿದೆ ಮತ್ತು ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿರುವ ವಿವಿಧ ಸಂಘಟನೆಗಳು, ಸಧ್ಯದಲ್ಲಿಯೇ “ಕೊಡವರ ನಡೆ ಕಟ್ಟೆಮಾಡು ಕಡೆ” ಬೃಹತ್ ಜಾಥಾ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿವೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಜಪೇಟೆ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಶ್ರೀಮಹಾ ಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ರಾಜಕೀಯ ಹಿನ್ನೆಲೆಯುಳ್ಳ ಕೆಲವು ಅನಾಗರೀಕ ವ್ಯಕ್ತಿಗಳು ಕೊಡವ ಜನಾಂಗದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದ್ದು, ಕೊಡವ ಮಹಿಳೆಯರನ್ನು ಅವಮಾನಿಸಲಾಗಿದೆ, ಕೆಲವರ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿದರು. ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ನಡೆಸಿದ ಹೋರಾಟಕ್ಕೆ ಒಂದು ಜನಾಂಗ ಬೆಂಬಲ ನೀಡಿರಲಿಲ್ಲ. ಕೊಡವರು ಎಂದಿಗೂ ಅವರ ವಿರೋಧಿಗಳಲ್ಲ, ಮೊದಲು ಆ ಜನಾಂಗ ಒಂದು ಬಾರಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಒತ್ತಾಯಿಸಿದರು. ಕೊಡವರೆಲ್ಲರು ಒಗ್ಗೂಡಿ ಸಧ್ಯದಲ್ಲಿಯೇ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ “ಕೊಡವರ ನಡೆ ಕಟ್ಟೆಮಾಡು ಕಡೆ” ಬೃಹತ್ ಜಾಥಾ ನಡೆಸುವುದಾಗಿ ತಿಳಿಸಿದರು. ಕಟ್ಟೆಮಾಡು ಶ್ರೀ ಭದ್ರಕಾಳಿ ದೇವಾಲಯದ ಅಧ್ಯಕ್ಷ ರವಿ ಸುಬ್ಬಯ್ಯ ಮಾತನಾಡಿ ಸುಮಾರು 20 ಮಂದಿ ಕೊಡವರು ಸಂಪ್ರದಾಯದಂತೆ ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಮೊದಲು ಶ್ರೀಭದ್ರಕಾಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಮಹಾ ಮೃತ್ಯುಂಜಯ ದೇವಾಲಯದ ಜಾತ್ರಾ ಮಹೋತ್ಸವಕ್ಕೆ ತೆರಳಿದ್ದೇವೆ. ಈ ಸಂದರ್ಭ ಕುಪ್ಯಚೇಲೆ ತೆಗೆದು ದೇವಾಲಯ ಪ್ರವೇಶಿಸುವಂತೆ ಕೆಲವರು ಒತ್ತಡ ಹೇರಿದ್ದು, ಕೆಲವರ ಮೇಲೆ ಹಲ್ಲೆಯಾಗಿದೆ, ಇದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ದೇವಾಲಯಗಳಲ್ಲಿ ಬೈಲಾಗಳಿಗೆ ಅವಕಾಶವಿಲ್ಲ, ಸಾಂಪ್ರದಾಯಿಕ ಉಡುಪು ಧರಿಸಿ ಬರುವುದನ್ನು ವಿರೋಧಿಸುವುದು ಸರಿಯಲ್ಲವೆಂದರು. ಮಾಜಿ ಕಾರ್ಯದರ್ಶಿ ಸಾದೇರ ರಮೇಶ್ ಮಾತನಾಡಿ ಶುಕ್ರವಾರ ಕಟ್ಟೆಮಾಡು ಶ್ರೀಭದ್ರಕಾಳಿ ದೇವಾಲಯದ ಹಬ್ಬ ಕೂಡ ಇದ್ದ ಕಾರಣ ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಹೋದವರು ಮಹಾ ಮೃತ್ಯುಂಜಯ ದೇವಾಲಯದ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳೋಣವೆಂದು ತೆರಳಿದ್ದೆವು. ಆದರೆ ನಮ್ಮ ಸಾಂಪ್ರದಾಯಿಕ ಉಡುಪಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದು ಇಡೀ ಕೊಡವ ಜನಾಂಗಕ್ಕೆ ಆದ ಅವಮಾನವೆಂದು ಬೇಸರ ವ್ಯಕ್ತಪಡಿಸಿದರು. ನಾವು ಇದೇ ಊರಿನಲ್ಲಿ ಹುಟ್ಟಿ ಬೆಳೆದವರು, ದೇವಾಲಯದ ಜೀರ್ಣೋದ್ಧಾರದ ಸಂದರ್ಭ ಮತ್ತು ಈ ಬಾರಿಯ ಜಾತ್ರೋತ್ಸವಕ್ಕೆ ಸಾಕಷ್ಟು ಧನ ಸಹಾಯ ಮಾಡಿದ್ದೇವೆ. ಆದರೆ ನಮಗೆ ಅವಮಾನ ಮಾಡಲಾಗಿದೆ, ಕೊಡವರ ಸಾಂಪ್ರದಾಯಿಕ ಕುಪ್ಯಚೇಲೆಯನ್ನು ಯಾರಿಂದಲೂ ಬಿಚ್ಚಿಸಲು ಸಾಧ್ಯವಿಲ್ಲ ಎಂದರು. ಜಬ್ಬೂಮಿ ಸಂಘಟನೆಯ ಅಧ್ಯಕ್ಷ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ ಮಾತನಾಡಿ ಕಳೆದ 8-10 ವರ್ಷಗಳಿಂದ ಜಿಲ್ಲೆಯಲ್ಲಿ ಈ ರೀತಿಯ ಬೆಳವಣಿಗೆಗಳಾಗುತ್ತಿದ್ದು, ಜಿಲ್ಲೆಯಲ್ಲಿ ಸಾಮರಸ್ಯ ಕಾಪಾಡಬೇಕು ಎನ್ನುವ ಉದ್ದೇಶದಿಂದ ಸರ್ವ ಜನಾಂಗಗಳ ಒಕ್ಕೂಟವನ್ನು ರಚಿಸಲಾಯಿತು. ಆದರೆ ಇದಕ್ಕೆ ಒಂದು ಜನಾಂಗದಿಂದ ಬೆಂಬಲ ದೊರೆಯಲಿಲ್ಲ. ಈ ಹಿಂದೆ ತಲಕಾವೇರಿ ಕ್ಷೇತ್ರದಲ್ಲಿ ಕೂಡ ಕುಪ್ಯಚೇಲೆ ಕುರಿತು ಗೊಂದಲ ಸೃಷ್ಟಿಸಲಾಗಿತ್ತು. ಇದರ ಪರಿಣಾಮ ಇಂದು ಎಲ್ಲಾ ಕೊಡವರು ಕುಪ್ಯಚೇಲೆ ಧರಿಸುವಂತ್ತಾಗಿದ್ದು ಮತ್ತು ಕ್ಷೇತ್ರಕ್ಕೆ ಬರುವಂತ್ತಾಗಿದ್ದು, ಗೊಂದಲ ಸೃಷ್ಟಿಸಿದವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು. ಕಟ್ಟೆಮಾಡು ಪ್ರಕರಣದಲ್ಲಿ ಒಂದು ಜನಾಂಗವನ್ನು ಗುರಿ ಮಾಡುವುದಿಲ್ಲ, ಕೆಲವು ಕಿಡಿಗೇಡಿಗಳಿಂದ ಈ ಘಟನೆ ನಡೆದಿದೆ. ಸಂಬಂಧಪಟ್ಟ ಇಲಾಖೆಗಳು ಎಚ್ಚರವಹಿಸುವ ಅಗತ್ಯವಿದ್ದು, ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡರೆ ಮತ್ತೆ ಈ ರೀತಿಯ ಪ್ರಕರಣಗಳು ಮರುಕಳಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಕೊಡವರು ಏನೇ ಮಾಡಿದರೂ ಯಾಕೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, “ಕೊಡವರ ನಡೆ ಕಟ್ಟೆಮಾಡು ಕಡೆ” ಬೃಹತ್ ಜಾಥಾ ಯಾರ ವಿರುದ್ಧವೂ ಅಲ್ಲ, ಬದಲಿಗೆ ಸ್ವಾಭಿಮಾನಕ್ಕಾಗಿ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದರು. ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ಪ್ರಮುಖ ಪಾಲೇಂಗಡ ಅಮಿತ್ ಭೀಮಯ್ಯ ಕೊಡವರು ಕೊಡವ ಸಾಂಪ್ರದಾಯಿಕ ಉಡುಪು ಧರಿಸಿ ದೇವಾಲಯಕ್ಕೆ ಬರಬಾರದೆಂದು ಹೇಳುವ ಅಧಿಕಾರವನ್ನು ಯಾರು ಯಾರಿಗೂ ನೀಡಿಲ್ಲ. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು, ತಪ್ಪಿತಸ್ಥರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ಪ್ರಧಾನಮಂತ್ರಿಗಳು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು ಘೋಷಿಸಿಕೊಂಡಿದ್ದಾರೆ. ಆದರೆ ಅವರದ್ದೇ ಪಕ್ಷದಲ್ಲಿರುವ ಕಟ್ಟೆಮಾಡಿನ ವ್ಯಕ್ತಿ ಆ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಅನರ್ಹರು ಎಂದು ತಿಳಿಸಿದ ಅವರು, ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕೆಂದರು. ಗ್ರಾಮಸ್ಥರಾದ ಅಚ್ಚಕಾಳೇರ ಸವಿತಾ ನವೀನ್ ಮಾತನಾಡಿ ದೇವಾಲಯದಲ್ಲಿ ಮಹಿಳೆಯರ ಮೇಲೆ ಕೂಡ ಹಲ್ಲೆಯಾಗಿದೆ, ನಾವು ಹುಟ್ಟಿದ ಊರಲ್ಲಿ ನಮಗೆ ಬೆಲೆ ಇಲ್ಲದಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಕೊಡವರ ಮೇಲೆ ಇನ್ನು ಮುಂದೆ ದೌರ್ಜನ್ಯ ನಡೆಯಬಾರದು ಎಂದು ಒತ್ತಾಯಿಸಿದರು.