ಮಡಿಕೇರಿ ಡಿ.28 NEWS DESK : ಮರಗೋಡಿನ ಕಟ್ಟೆಮಾಡು ಶ್ರೀಮಹಾ ಮೃತ್ಯುಂಜಯ ದೇವಾಲಯದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಕೊಡವ ಸಾಂಪ್ರದಾಯಿಕ ಕುಪ್ಯಚೇಲೆಯನ್ನು ಧರಿಸುವ ಕೊಡವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ ಎಂದು ಅರೆಕಾಡು ಹೊಸ್ಕೇರಿಯ ಕೊಡವ ವೆಲ್ ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಆರೋಪಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಅಸೋಸಿಯೇಷನ್ ನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರು ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ತಮ್ಮ ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ತಮಗೆ ಒಪ್ಪುವ ಉಡುಪನ್ನು ತೊಡುವ ಮತ್ತು ಆಹಾರವನ್ನು ಸೇವಿಸುವ ಸ್ವಾತಂತ್ರ್ಯವನ್ನು ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರತಿಯೊಬ್ಬರಿಗೂ ನೀಡಿದೆ. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯ ಪ್ರವೇಶಿಸಬಾರದು ಎನ್ನುವ ಸರ್ವಾಧಿಕಾರದ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. ಅತ್ಯಂತ ವಿಶಿಷ್ಟವಾದ ಸಂಸ್ಕೃತಿಯನ್ನು ಹೊಂದಿರುವ ಸೂಕ್ಷ್ಮ ಜನಾಂಗದ ಕೊಡವರು ದೇವಾಲಯಗಳಿಗೆ ಕುಪ್ಯಚೇಲೆಯನ್ನು ಧರಿಸಿ ಪ್ರವೇಶಿಸುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದನ್ನು ತಡೆಯುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಡವರ ಕುಪ್ಯಚೇಲೆಗೆ ವಿಶ್ವದಾದ್ಯಂತ ಗೌರವವಿದೆ, ಆದರೆ ಕೊಡವರು ಹುಟ್ಟಿ ಬೆಳೆದ ನಾಡಿನಲ್ಲೇ ಅಪಮಾನವಾಗುತ್ತಿರುವುದು ಅತ್ಯಂತ ವಿಷಾದಕರ ಬೆಳವಣಿಗೆಯಾಗಿದೆ. ಸ್ವಾಭಿಮಾನಿ ಕೊಡವರು ಪ್ರತಿಯೊಂದು ಜನಾಂಗದೊಂದಿಗೆ ಅನ್ಯೋನ್ಯತೆಯಿಂದ ಇರಲು ಬಯಸುತ್ತದೆ ಮತ್ತು ಕಾನೂನಿಗೆ ಗೌರವ ನೀಡುತ್ತದೆ. ಆದರೆ ಕಟ್ಟೆಮಾಡು ದೇವಾಲಯದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಕೊಡವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿರುವ ಜಯ ಚಿಣ್ಣಪ್ಪ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ವಿವಿಧ ಸಂಘಟನೆಗಳು ಮುಂದಿನ ದಿನಗಳಲ್ಲಿ ನಡೆಸುವ “ಕೊಡವರ ನಡೆ ಕಟ್ಟೆಮಾಡು ಕಡೆ” ಬೃಹತ್ ಜಾಥಾಕ್ಕೆ ಕೊಡವ ವೆಲ್ ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡಿ ಭಾಗವಹಿಸಲಿದೆ ಎಂದು ತಿಳಿಸಿದ್ದಾರೆ.