ಸಿದ್ದಾಪುರ ಜ.7 NEWS DESK : ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ನೂತನ ಕಟ್ಟಡದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಾಪುರ ವ್ಯಾಪ್ತಿಯ ಸಹಕಾರ ಸಂಘದ ಸದಸ್ಯರುಗಳಿಗೆ ಆರ್ಥಿಕ ಬಲ ನೀಡುವ ಮೂಲಕ ಜಿಲ್ಲೆಯ ಪ್ರಗತಿ ಪಥದತ್ತ ಸಾಗುವ ಸಹಕಾರ ಸಂಘಗಳಲ್ಲಿ ಒಂದಾಗಿದೆ. ಹಲವಾರು ವರ್ಷಗಳಿಂದಲೂ ಉತ್ತಮ ಸೇವೆ ಸಲ್ಲಿಸುವುದರ ಮೂಲಕ ಮಾದರಿ ಸಹಕಾರ ಸಂಘವಾಗಿ ಮೆಚ್ಚುಗೆಗಳಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಸಹಕಾರ ಸಂಸ್ಥೆ ಗಳು ನಾಗರಿಕರ ಸೇವೆಗೆ ಆರ್ಥಿಕ ಸಹಕಾರವನ್ನು ನೀಡುವ ಮೂಲಕ ಆಯಾ ಪ್ರದೇಶದಲ್ಲಿ ಪ್ರಾಮಾಣಿಕ ವಾಗಿ ಸೇವೆಯನ್ನು ಒದಗಿಸುತ್ತಿರು ವುದು ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರ ಸಂಘಗಳ ಕಟ್ಟಡಗಳು ಗ್ರಾಹಕರ ಸೇವಾ ಕೇಂದ್ರವಾಗಿ ಮುಂದುವರಿಯು ವಂತಾಗಲಿ ಸಹಕಾರ ಸಂಘದ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ ಎಸ್ ವೆಂಕಟೇಶ್ ಮಾತನಾಡಿ, ಹಲವಾರು ವರ್ಷಗಳಿಂದಲೂ 2 ಸಾವಿರಕ್ಕೂ ಅಧಿಕ ಸದಸ್ಯರುಗಳನ್ನು ಹೊಂದಿರುವ ಸಹಕಾರ ಸಂಘ ಸೇವಾ ಮನೋಭಾವದೊಂದಿಗೆ ಉತ್ತಮ ಆಡಳಿತ ನಡೆಸಿಕೊಂಡು ಬರುತ್ತಿದ್ದು ಮತ್ತಷ್ಟು ಅಭಿವೃದ್ಧಿಯೊಂದಿಗೆ ಮುನ್ನಡೆಯಲು ಸಹಕಾರ ಸಂಘವು ರೂ.1 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ವಾರ್ಷಿಕ ರೂ. 1 ಕೋಟಿಗೂ ಅಧಿಕ ನಿವ್ವಳ ಲಾಭವನ್ನು ಪಡೆಯುತ್ತಿದ್ದು ಪ್ರಗತಿಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರ ಸಂಘಕ್ಕೆ ಹೆಚ್ಚು ಆದಾಯ ಗಳಿಸುವ ಉದ್ದೇಶದಿಂದ ಪಟ್ಟಣದಲ್ಲಿ ಇನ್ನೊಂದು ವಾಣಿಜ್ಯ ನೂತನ ಕಟ್ಟಡವನ್ನು ನಿರ್ಮಾಣ ಮಾಡ ಲಾಗುವುದೆಂದರು. ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ಪ್ರೇಮ ಗೋಪಾಲ್, ಸಿದ್ದಾಪುರ ಗ್ರಾ.ಪಂ ಉಪಾಧ್ಯಕ್ಷ ಪಳನಿ ಸ್ವಾಮಿ, ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಿಜೋಯ್, ಮಾಜಿ ಅಧ್ಯಕ್ಷ ಕುಕ್ಕನೂರು ನಾಣಯ್ಯ, ಬ್ಯಾಂಕ್ ವ್ಯವಸ್ಥಾಪಕ ಪ್ರಸನ್ನ ಸೇರಿದಂತೆ ಸಂಘದ ನಿರ್ದೇಶಕರುಗಳು ಹಾಗೂ ಸದಸ್ಯರುಗಳು ಇನ್ನಿತರರು ಹಾಜರಿದ್ದರು. ಇದೇ ಸಂದರ್ಭ ಕಟ್ಟಡ ನಿರ್ಮಾಣ ಮಾಡಿದ ಗುತ್ತಿಗೆದಾರ ಥೋಮಸ್ ಅವರನ್ನು ಸನ್ಮಾನಿಸಲಾಯಿತು.