ವಿರಾಜಪೇಟೆ ಜ.13 NEWS DESK : ವಾರ್ಷಿಕೋತ್ಸವ ಎಂಬುವುದು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವ ಅವಿಸ್ಮರಣೀಯ ದಿನವಾಗಿದ್ದು, ಪೋಷಕರು ಶಿಕ್ಷಕರೊಂದಿಗೆ ಹೊಂದಿಕೊಂಡು ತಮ್ಮ ಮಕ್ಕಳ ಧನಾತ್ಮಕ ಬೆಳವಣಿಗೆಗೆ ಪೂರಕವಾಗಿ ನಿಲ್ಲಬೇಕು ಎಂದು ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಸಲಹೆ ನೀಡಿದರು. ವಿರಾಜಪೇಟೆಯ ಸಂತ ಅನ್ನಮ್ಮ ಸಭಾ ಭವನದಲ್ಲಿ ನಡೆದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಪಠ್ಯ ಹಾಗೂ ಪಠ್ಯೇತರ ಪ್ರತಿಭೆ ಪೋಷಕರ ಮುಂದೆ ಪ್ರದರ್ಶನಗೊಳ್ಳುವ ದಿನ ವಿದ್ಯಾರ್ಥಿ ಜೀವನದ ಮಹತ್ವದ ದಿನವಾಗಿರುತ್ತದೆ. ಲಿಟಲ್ ಸ್ಕಾಲರ್ಸ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವನ್ನು ಮಾತ್ರ ನೀಡುತ್ತಿಲ್ಲ. ಬದಲಾಗಿ ಶಿಕ್ಷಣದೊಂದಿಗೆ ಜೀವನದ ಮೌಲ್ಯಗಳನ್ನು ಕಲಿಸಿಕೊಡುವ ಕೆಲಸವನ್ನು ಮಾಡುತ್ತಿದೆ. ಅದೇ ರೀತಿಯಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರೊಂದಿಗೆ ಪೋಷಕರು ಸಹ ಸದಾ ಪೂರಕವಾಗಿ ಶ್ರಮಿಸಬೇಕೆಂದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಅನುಗುಣವಾಗಿ ಕ್ರಿಯಾಶೀಲತೆಯೊಂದಿಗೆ ಭಾಗವಹಿಸಲು ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಕೇವಲ ಶೈಕ್ಷಣಿಕ ಮಾತ್ರವಲ್ಲ ಶೈಕ್ಷಣಿಕೇತರ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಿ ಪ್ರಾಯೋಗಿಕವಾಗಿ ಕಲಿಸಲಾಗುತ್ತಿದೆ. ಈ ಸಂಸ್ಥೆಯು ರವೀಂದ್ರನಾಥ ಟಾಗೋರ್ ಪರಿಕಲ್ಪನೆಯಂತೆ ಶೈಕ್ಷಣಿಕ ಹಾಗೂ ಶೈಕ್ಷಣಿಕೇತರ ಎರಡು ಕ್ಷೇತ್ರದಲ್ಲೂ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತಿದೆ. ಈ ರೀತಿಯ ಶಿಕ್ಷಣ ಕೇವಲ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಮಾತ್ರ ನೀಡುವುದಿಲ್ಲ. ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯಕವಾಗಿದೆ ಎಂದರು. ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಮಾತನಾಡಿ, ಸಂಸ್ಥೆಯು ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಕೆಲಸವನ್ನು ಮಾಡುತ್ತಿದೆ. ಆರಂಭಿಕ ಹಂತದಲ್ಲಿ ವಿದ್ಯಾರ್ಥಿಗಳನ್ನು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಈ ಶಿಕ್ಷಣ ಸಂಸ್ಥೆ ಕೇವಲ ಶಿಕ್ಷಣವನ್ನು ಮಾತ್ರ ನೀಡುತ್ತಿಲ್ಲ.ಅದರೊಂದಿಗೆ ವಿದ್ಯಾರ್ಥಿಗಳಿಗೆ ಇತರೆ ಜ್ಞಾನವನ್ನು ಹಂಚುವ ಸಮಾಜಮುಖಿ ಕೆಲಸವನ್ನು ಮಾಡುತ್ತಿದೆ. ವಿದ್ಯಾರ್ಥಿಗಳೊಂದಿಗೆ ಸೇರಿ ಸಂಸ್ಥೆಯ ಮುಖ್ಯಸ್ಥರಾದ ಪೂಜಾ ರವರು ವಿವಿಧ ಕಡೆಗಳಲ್ಲಿ ಸಮಾಜ ಸೇವೆಯ ಕೆಲಸವನ್ನು ಮಾಡಿರುವುದು ಶ್ಲಾಘನೀಯವಾಗಿದ್ದು. ಸಂಸ್ಥೆಯ ಮುಖ್ಯಸ್ಧೆಯಾಗಿ ಅವರು ನಿರ್ವಹಿಸುತ್ತಿರುವ ಜವಾಬ್ದಾರಿ ಸಮಾಜವೇ ಹೆಮ್ಮೆ ಪಡುವಂತಹದಾಗಿದೆ ಎಂದರು. ಸಂಸ್ಥೆಯ ಮುಖ್ಯಸ್ಥರಾದ ಪೂಜಾ ಸಜೇಶ್ ಮಾತನಾಡಿ, ಇದೊಂದು ವಿದ್ಯಾರ್ಥಿಗಳನ್ನು ಪೋಷಕರನ್ನು ಒಗ್ಗೂಡಿಸುವ ಒಂದು ಸಮಾರಂಭವಾಗಿದ್ದು, ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಮಾತ್ರ ಮಹತ್ವವನ್ನು ನೀಡದೆ ಶಿಕ್ಷಣದೊಂದಿಗೆ ಜೀವನದ ಮೌಲ್ಯ, ಕ್ರೀಡೆ , ಸಂಗೀತ, ಕರಾಟೆಗಳಂತಹ ಚಟುವಟಿಕೆಗಳನ್ನು ಕಲಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳನ್ನು ಜ್ಞಾನವಂತರನ್ನಾಗಿ ಮಾಡುವುದು ಮಾತ್ರವಲ್ಲದೆ ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ನಿರ್ಮಿಸುವ ಪ್ರಜೆ ಗಳನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಅರಮೇರಿ ಕಳಂಚೇರಿ ಮಠದ ಮಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ , ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಗುರುಗಳಾದ ರೆ. ಫಾ .ಜೇಮ್ಸ್ ಡೊಮಿನಿಕ್, ಪುರಸಭಾ ಸದಸ್ಯ ಮಹಮ್ಮದ್ ರಫಿ, ವಿರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್, ಸಿ.ಆರ್.ಪಿ ಗಳಾದ ಸಿಂಧು, ಸುಷ್ಮಾ, ಲಿಟಲ್ ಸ್ಕಾಲರ್ ಅಕಾಡೆಮಿಯ ಮುಖ್ಯ ಶಿಕ್ಷಕಿ ಮೀರಾ ಪೂಣಚ್ಚ, ಚೊಂದಮ್ಮ ಪ್ರದೀಪ್, ಬಿ.ಆರ್.ಸಿ, ಬಿಂದು , ಬಿ.ಆರ್.ಪಿ ರುಕ್ಮಿಣಿ , ಶೈಲ, ಸಿ.ಆರ್.ಪಿ ಸುಷ , ಹಿಂದೂ ಮಹಿಳಾ ಅಸೋಸಿಯೇಷನ್ ಅಧ್ಯಕ್ಷೆ ಶಿಬಾ ಪೃಥ್ವಿನಾಥ್, ವಿದ್ಯಾರ್ಥಿಗಳು, ಪೋಷಕರು,ಲಿಟಲ್ ಸ್ಕಾಲರ್ಸ್ ಅಕಾಡೆಮಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಐಕ್ಯಂ ಎಂಬ ವಿಷಯವಾಧಾರಿತವಾದ ವಿಶೇಷ ನೃತ್ಯವನ್ನು ಪ್ರದರ್ಶಿಸಲಾಯಿತು.