ಸುಂಟಿಕೊಪ್ಪ NEWS DESK ಜ.13 : ಸುಂಟಿಕೊಪ್ಪ ಸಮೀಪ ಮಳ್ಳೂರು ಗ್ರಾಮದಲ್ಲಿ ನಾಲ್ಕು ತಿಂಗಳ ಕರುವೊಂದು ಮೃತಪಟ್ಟಿದ್ದು, ವನ್ಯಜೀವಿ ದಾಳಿ ಮಾಡಿರಬಹುದೆಂದು ಶಂಕಿಸಲಾಗಿದೆ. ಮಳ್ಳೂರಿನ ನಿವಾಸಿ ತೇಜ ಕುಮಾರ್ ಎಂಬುವವರಿಗೆ ಸೇರಿದ ಕರು ಇದಾಗಿದ್ದು, ಮೃತದೇಹದ ಅರ್ಧಭಾಗವನ್ನು ತಿಂದು ಹಾಕಿರುವುದು ಗೋಚರಿಸಿದೆ. ಕರುವನ್ನು ಹಾರಂಗಿ ಹಿನ್ನೀರು ಭಾಗದ ಕಾಫಿ ಕಣದ ಪಕ್ಕದಲ್ಲಿ ಮೇಯಲೆಂದು ಕಟ್ಟಿ ಹಾಕಲಾಗಿತ್ತು. ಹುಲಿ ಅಥವಾ ಚಿರತೆ ದಾಳಿಯಿಂದ ಕರು ಮೃತಪಟ್ಟಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಆನೆಕಾಡು ವ್ಯಾಪ್ತಿಯ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.