ಸೋಮವಾರಪೇಟೆ NEWS DESK ಜ.13 : ರಾಷ್ಟ್ರ ಸುಭಿಕ್ಷವಾಗಿರಲಿ ಸಂಕ್ರಾಂತಿ ಎಲ್ಲರ ಬದುಕನ್ನು ಹಸನುಗೊಳಿಸಲಿ ಎಂದು ತುಮಕೂರು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ. ಶ್ರೀ.ಸಿದ್ಧಲಿಂಗ ಸ್ವಾಮೀಜಿ ಆಶಯ ವ್ಯಕ್ತಪಡಿಸಿ ಹಾರೈಸಿದರು. ಆಲೂರು ಸಿದ್ದಾಪುರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ ಗೈಕ್ಯ ಶತಾಯುಷಿ ಸಿದ್ದಮಲ್ಲಯ್ಯನವರ ಸಂಸ್ಮರಣೋತ್ಸವದಲ್ಲಿ ಪಾಲ್ಗೊಂಡ ಸಂದರ್ಭ ಮಾತನಾಡಿದ ಅವರು ವರ್ಷದ ಮೊದಲ ಹಬ್ಬ ಸಂಕ್ರಾಂತಿ ಇದು ರೈತರ ಪ್ರಮುಖವಾದ ಹಬ್ಬ ತಾವು ಬೆಳೆದ ಬೆಳೆಯನ್ನು ಪೂಜಿಸಿ, ಪ್ರಾರ್ಥಿಸುವ ಸಂಭ್ರಮದ ಹಬ್ಬವಾಗಿದೆ. ಕಷ್ಟಪಟ್ಟು ದುಡಿದು ಬೆಳೆಯುವ ಅನ್ನದಾತನ ಬದುಕು ಹಸನಾಗಬೇಕೆಂದರು. ಸಂಕ್ರಾಂತಿಯಂದು ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶಿಸುವ ಕಾಲ ಕಳೆದ ವರ್ಷ ಹಲವು ಅವಗಡ,ಅನಾಹುತಗಳು ಸಂಭವಿಸಿವೆ,ಈ ವರ್ಷ ಅಂತಹ ಘಟನೆಗಳು ನಡೆಯದಿರಲಿ. ಕಾಲಕಾಲಕ್ಕೆ ತಕ್ಕಂತೆ ಮಳೆ ಬೆಳೆಯಾಗಲಿ ರಾಷ್ಟ್ರ ಸುಭೀಕ್ಷವಾಗಿರಲಿ ಎಂದು ಆಶಿಸಿದರು. ಕೊಡಗು ಜಿಲ್ಲೆಯನ್ನು ದಕ್ಷಿಣದ ಕಾಶ್ಮೀರ ಎನ್ನುತ್ತೇವೆ ಇಲ್ಲಿಯೂ ಕಳೆದ ಭಾರಿ ಅಕಾಲಿಕ ಮಳೆ,ಪ್ರಕೃತಿ ವೈಪರ್ಯದಿಂದ ಕಾಫಿ ಬೆಳೆಗಾರರು ಸಂಕಷ್ಟ ಅನುಭವಿಸಿದ್ದಾರೆ.ಈ ವರ್ಷ ಎಲ್ಲಾರಿಗೂ ಶುಭವಾಗಲಿ ಎಂದರು. ಈ ಸಂದರ್ಭ ಅರಮೆರಿ ಮಠದ ಶ್ರೀ.ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೂಡ್ಲಿ ಮಠದ ಸದಾಶಿವ ಸ್ವಾಮೀಜಿ,ಕಲ್ಲು ಮಠದ ಮಹಾಂತ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು, ಪ್ರಮುಖರು ಉಪಸ್ಥಿತರಿದ್ದರು.