ಮಡಿಕೇರಿ ಜ.15 NEWS DESK : ನಗರದ ಸಂತ ಮೈಕಲರ ದೇವಾಲಯದ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಕಳೆದ 3 ದಿನಗಳಿಂದ ನವೇನ ಪ್ರಾರ್ಥನೆಗಳ ಮೂಲಕ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಂಗಳವಾರ ಸಂಜೆ ದಿವ್ಯ ಬಲಿಪೂಜೆ ನಡೆಯಿತು. ಪ್ರಧಾನಯಾಜಕರಾದ ಫಾ.ಮೈಕಲ್ ಮರಿ ಹಬ್ಬದ ಬಲಿಪೂಜೆ ನೆರವೇರಿಸಿದರು. ಕುಶಾಲನಗರ, ಅಬ್ಬೂರುಕಟ್ಟೆ, ಸೋಮವಾರಪೇಟೆ, ಮಾದಾಪುರ, ಹಟ್ಟಿಹೊಳೆ, ತಾಳತ್‌ಮನೆ ಸೇರಿದಂತೆ ವಿವಿಧ ದೇವಾಲಯಗಳ ಧರ್ಮಗುರುಗಳು ಪಾಲ್ಗೊಂಡಿದ್ದರು. ನೂರಾರು ಭಕ್ತರು ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾತ್ರಿ ವಿದ್ಯುತ್ ಅಲಂಕೃತ ಮಂಟಪದಲ್ಲಿ ಸಂತ ಮೈಕಲರ ಪ್ರತಿಮೆಯ ಮೆರವಣಿಗೆ ನಡೆಯಿತು. ಭಕ್ತರು ಉರಿಯುತ್ತಿದ್ದ ಮೇಣದ ಬತ್ತಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ದೇವಾಲಯದಿಂದ ಹೊರಟ ಮೆರವಣಿಗೆ ಮಂಗೇರೀರ ಮುತ್ತಣ್ಣ ವೃತ್ತ, ಸ್ಕ್ವಾಡರ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಚೌಕಿವರೆಗೆ ಸಾಗಿ ಮತ್ತೆ ಅದೇ ರಸ್ತೆ ಮೂಲಕ ದೇವಾಲಯಕ್ಕೆ ಹಿಂತಿರುಗಿತು. ಬಳಿಕ ದೇವಾಲಯದಲ್ಲಿ ಆರಾಧನೆ ನಡೆಯಿತು. ನಂತರ ಭಕ್ತಾಧಿಗಳಿಗೆ ಅನ್ನದಾನ ನಡೆಯಿತು. ಸಂತ ಮೈಕಲರ ದೇವಾಲಯದ ಧರ್ಮಗುರು ಫಾ. ಜಾರ್ಜ್ ದೀಪಕ್, ಸಹಾಯಕ ಗುರುಗಳಾದ ಫಾ.ಸಂಜಯ್‌ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು. ವಾರ್ಷಿಕೋತ್ಸವ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.