ನವದೆಹಲಿ NEWS DESK ಜ.15 : ಮೈಸೂರಿನ ಬನ್ನಿಮಂಟಪ ಸಮೀಪದ ಎಲ್ಐಸಿ ಸರ್ಕಲ್ ಬಳಿ “ಅರ್ಜುನ” ಸ್ಮಾರಕ ನಿರ್ಮಾಣಕ್ಕೆ ಮನವಿ* *ಮೈಸೂರು ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ಯೋಗ ಮ್ಯೂಸಿಯಂ ಮಾಡಲು ಒತ್ತಾಯ* *ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಸಂಸದ ಯದುವೀರ್ ಪತ್ರ* ಮೈಸೂರಿನ ಪಾರಂಪರಿಕತೆಗೆ, ಐತಿಹಾಸಿಕತೆಗೆ, ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಆಗ್ರಹ* ಪಾರಂಪರಿಕ ಹಾಗೂ ಐತಿಹಾಸಿಕ ಹಾಗೂ ಸಾಂಸ್ಕೃತಿಕ ರಾಜಧಾನಿ ಎಂದೇ ವಿಶ್ವಮಟ್ಟದಲ್ಲಿ ಖ್ಯಾತಿ ಹೊಂದಿರುವ ಮೈಸೂರಿನಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳಿಗೆ ನೆರವು ಒದಗಿಸಬೇಕೆಂದು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ *ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್* ಮನವಿ ಮಾಡಿದ್ದಾರೆ. ಈ ಸಂಬಂಧ ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಯದುವೀರ್ ಅವರು ಮನವಿ ಸಲ್ಲಿಸಿ, ಮೈಸೂರಿನ ಪಾರಂಪರಿಕತೆಗೆ ತಕ್ಕಂತೆ ಎಲ್ಐಸಿ ಸರ್ಕಲ್ ಬಳಿ “ಅರ್ಜುನ ಸ್ಮಾರಕ” ಮತ್ತು ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ಯೋಗ ಮ್ಯೂಸಿಯಂ ಆಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವರಿಗೆ ಸಂಸದರು ಮನವಿ ಮಾಡಿದ್ದಾರೆ. *ಸಂಸದರ ಹೇಳಿಕೆ* ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಸಂಸದ ಯದುವೀರ್, ಮೈಸೂರಿನ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೆಲವು ಯೋಜನೆಗಳ ಕುರಿತು ಚರ್ಚಿಸಲಾಗಿದೆ. ಇದರಲ್ಲಿ ಪ್ರಮುಖವಾಗಿರುವುದು ನಮ್ಮ ದಸರಾ ಆನೆ ಅರ್ಜುನ ಸ್ಮರಣಾರ್ಥ ಸ್ಮಾರಕ ಹಾಗೂ ಯೋಗ ಮ್ಯೂಸಿಯಂ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು. ಮೈಸೂರು ಮತ್ತು ದಸರಾ ಆನೆಗಳ ನಡುವೆ ಭಾವನಾತ್ಮಕ ಸಂಬಂಧವಿದೆ. ಎಲ್ಲರ ಮನ ಸೆಳೆದಿದ್ದ ಅರ್ಜುನ ಆನೆ ದುರಾದೃಷ್ಟವಶಾತ್ ನಮ್ಮನ್ನು ಅಗಲಿದೆ. ಹಲವು ವರ್ಷಗಳ ಕಾಲ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಗಾಂಭೀರ್ಯದಿಂದ ಸಾಗಿದ ಈ ಗಜ ನೆನಪಿನಲ್ಲಿ ಸ್ಮಾರಕ ನಿರ್ಮಾಣ ಮಾಡುವುದು ಸೂಕ್ತ ಎನಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅರ್ಜುನ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಕೇಂದ್ರ ಸಚಿವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಬೇಗ ಇದು ಅನುಷ್ಠಾನಕ್ಕೆ ಬರುವ ನಿರೀಕ್ಷೆ ಇದೆ ಎಂದು ಸಂಸದರು ವಿವರಿಸಿದರು. ಮೈಸೂರಿನ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಲು ಈ ಯೋಜನೆಯನ್ನು ಸಾಕಾರಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ ಎಂದು ಕೇಂದ್ರ ಸಚಿವರಿಗೆ ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ. ಮೈಸೂರು ಮತ್ತು ದಸರಾ ಆನೆಗಳಿಗೆ ದಶಕಗಳ ಅವಿನಾಭಾವ ಸಂಬಂಧವಿದೆ. ಮೈಸೂರು ಎಂದರೆ ದಸರಾ ಆನೆಗಳು ಎನ್ನುವಷ್ಟರ ಮಟ್ಟಿಗೆ ಸಮ್ಮಿಳಿತಗೊಂಡಿವೆ. ಈ ನಿಟ್ಟಿನಲ್ಲಿ ದಸರಾ ಜಂಬೂಸವಾರಿಯ ರಾತ್ರಿ ವೇಳೆ ಪಂಜಿನ ಕವಾಯತು ನಡೆಯುವ ಬನ್ನಿ ಮಂಟಪ ಸಮೀಪದ ಎಲ್ಐಸಿ ಸರ್ಕಲ್ ಬಳಿ ದಸರಾ ಆನೆ “ಅರ್ಜುನ” ಹೆಸರಿನಲ್ಲಿ ಸ್ಮಾರಕ ನಿರ್ಮಿಸಿದರೆ ತಕ್ಕ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಸಂಸದರು ಆಗ್ರಹಿಸಿದ್ದಾರೆ. ಮೈಸೂರಿನ ಶ್ರೀಮಂತ ಪಾರಂಪರಿಕತೆ ಹಾಗೂ ವಿಶ್ವವಿಖ್ಯಾತ ದಸರಾ ಹಬ್ಬದ ಆಚರಣೆಗೆ ಇದು ಮತ್ತೊಂದು ಕಳಶವಿಟ್ಟಂತೆ ಇರುತ್ತದೆ ಎಂದು ಸಂಸದರು ಪತ್ರದಲ್ಲಿ ವಿವರಿಸಿದ್ದಾರೆ. *ಅರ್ಜುನ ಸ್ಮರಣಾರ್ಥ ಸ್ಮಾರಕ* ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ “ಅರ್ಜುನ” ಆನೆ ಹಲವಾರು ವರ್ಷಗಳ ಕಾಲ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದೆ. ಆದರೆ ಕಾಡಾನೆಯೊಂದರ ದಾಳಿಯಿಂದಾಗಿ ನಾವು ಅರ್ಜುನ ಆನೆಯನ್ನು ಕಳೆದುಕೊಂಡಿದ್ದೇವೆ. ಈಗ ಈ “ಅರ್ಜುನ” ಆನೆಯ ಸ್ಮರಣಾರ್ಥ, ಗೌರವ ಸೂಚಕವಾಗಿ ಎಲ್ಐಸಿ ಸರ್ಕಾಲ್ ಅನ್ನು “ಅರ್ಜುನ” ಆನೆ ಹೆಸರಿಡಬೇಕು. ಇದನ್ನು ಐತಿಹಾಸಿಕ ಹಾಗೂ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ. ಈ ಅರ್ಜುನ ಆನೆ ಸ್ಮಾರಕ, ಮೈಸೂರಿನ ಚರಿತ್ರೆಗೆ, ಸಾಂಸ್ಕೃತಿಕತೆಗೆ, ಐತಿಹಾಸಿಕತೆಗೆ ಹಾಗೂ ಪಾರಂಪರಿಕತನಕ್ಕೆ ಸಾಕ್ಷಿಯಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಬೇಕು. ಪರಿಸರ ಸ್ನೇಹಿ ಹಾಗೂ ಸಾಂಸ್ಕೃತಿಕತೆಯ ಸಂಗಮದೊಂದಿಗೆ ಇದನ್ನು ಅಭಿವೃದ್ಧಿಪಡಿಸಿದರೆ ಮೈಸೂರಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹಾಗೂ ಆರ್ಥಿಕತೆಗೆ ಮತ್ತಷ್ಟು ಕೊಡುಗೆ ನೀಡಿದಂತಾಗುತ್ತದೆ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ. *ಮೈಸೂರಿನ ಇತಿಹಾಸದ ಚಿತ್ರಣ* ಮೈಸೂರಿನ ಇತಿಹಾಸ ಹಾಗೂ ದಸರಾ ಚಿತ್ರಣವನ್ನು ತೋರಲು ವೃತ್ತದ ಸುತ್ತಲೂ ಭಿತ್ತಿಚಿತ್ರಗಳು ಅಥವಾ ಫಲಕಗಳನ್ನು ಮತ್ತು ಪ್ರಾಚೀನ ಸಂಪ್ರದಾಯದಲ್ಲಿ ಆನೆಗಳ ಪ್ರಾಮುಖ್ಯತೆಯನ್ನು ತೋರಬಹುದು. ಸೌರ-ಚಾಲಿತ ಬೆಳಕಿನ ವ್ಯವಸ್ಥೆ ಹಾಗೂ ಮಳೆನೀರು ಕೊಯ್ಲು, ವ್ಯವಸ್ಥೆ, ಉದ್ಯಾನವನ ಅಭಿವೃದ್ಧಿಪಡಿಸುವ ಮೂಲಕ ಯೋಜನೆಯನ್ನು ಪರಿಸರಸ್ನೇಹಿ ಯೋಜನೆಯಾಗಿ ರೂಪಿಸಬಹುದು. ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಸಂಪೂರ್ಣ ಯೋಜನೆಯ ವರದಿ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಅರ್ಜುನ ಆನೆಯ ಬೃಹತ್ ಪ್ರತಿಮೆ ನಿರ್ಮಾಣ ಸೇರಿದಂತೆ ಈ ಐತಿಹಾಸಿಕ ಹಾಗೂ ಪಾರಂಪರಿಕ ಯೋಜನೆಯ ಒಟ್ಟು ವೆಚ್ಚ 20 ಕೋಟಿ ರೂ. ಆಗಲಿದೆ ಎಂದು ಸಂಸದರು ಮನವಿ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ. *ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ಯೋಗ ಮ್ಯೂಸಿಯಂ ಮಾಡಲು ಆಗ್ರಹ* ಕೇಂದ್ರ ಸಚಿವರೊಂದಿಗೆ ಭೇಟಿ ಮಾಡಿದ ನಂತರ ಮಾತನಾಡಿದ ಸಂಸದ ಯದುವೀರ್, ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯನ್ನು ಯೋಗ ಮ್ಯೂಸಿಯಂ ಆಗಿ ಪರಿವರ್ತಿಸುವ ಬಗ್ಗೆಯೂ ಮನವಿ ಮಾಡಿದ್ದೇನೆ. ಈಗ ಜಾಗತಿಕವಾಗಿ ಮನ್ನಣೆ ಗಳಿಸಿರುವ ಯೋಗ ಜನ್ಮ ತಾಳಿದ್ದು ಮೈಸೂರಿನಲ್ಲಿ. ಈ ನಿಟ್ಟಿನಲ್ಲಿ ಯೋಗ ಕುರಿತು ಜನರಿಗೆ ಇನ್ನಷ್ಟು ಮಾಹಿತಿ ತಿಳಿಸಿಕೊಡುವ ನಿಟ್ಟಿನಲ್ಲಿ ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ಯೋಗ ಮ್ಯೂಸಿಯಂ ಆಗಿ ಪರಿವರ್ತಿಸುವುದು ಸೂಕ್ತ ಎಂದರು. ಈಗಾಗಲೇ ಇದನ್ನು ನವೀಕರಣ ಮಾಡಲು ರಾಜ್ಯ ಸರ್ಕಾರವು “ಸ್ವದೇಶಿ ದರ್ಶನ್” ಯೋಜನೆಯಡಿ ಅನುದಾನ ಬಿಡುಗಡೆ ಮಾಡಲು ಮನವಿ ಸಲ್ಲಿಸಿದೆ, ಈ ನಿಟ್ಟಿನಲ್ಲಿ ಯೋಗ ಮಹತ್ವ ಮತ್ತುಯೋಗ ಶ್ರೀಮಂತ ಇತಿಹಾಸವನ್ನು ಪ್ರಚುರಪಡಿಸಲು ಅನುವಾಗುವಂತೆ ಮ್ಯೂಸಿಯಂ ನಿರ್ಮಿಸಲು ಕೇಂದ್ರ ಸರ್ಕಾರ ಕೂಡ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲು ಮನವಿ ಸಲ್ಲಿಸಲಾಗಿದೆ ಎಂದರು. ಬಿಕೆಎಸ್ ಅಯ್ಯಂಗಾರ್ ಅವರು ಮೈಸೂರಿಗೆ ಯೋಗದ ಬಗ್ಗೆ ವಿಶ್ವ ಮನ್ನಣೆ ಕೊಡಿಸಿದ್ದಾರೆ. ನಮ್ಮ ಅರಮನೆಯಲ್ಲಿಯೂ ನಿರಂತರವಾಗಿ ಯೋಗ ಪ್ರದರ್ಶನಗಳನ್ನು ಏರ್ಪಡಿಸಲಾಗಿರುತ್ತದೆ. ಮೈಸೂರಿಗೆ ಯೋಗಕ್ಕೆ ವಿಶೇಷ ನಂಟಿದೆ. ಈ ನಿಟ್ಟಿನಲ್ಲಿ ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ಯೋಗ ಮ್ಯೂಸಿಯಂ ಆಗಿ ಪರಿವರ್ತಿಸಿದರೆ ಪ್ರವಾಸೋದ್ಯಮಕ್ಕೆ ಹಾಗೂ ಯೋಗಕ್ಕೆ ಮನ್ನಣೆ ನೀಡಿದಂತಾಗುತ್ತದೆ ಎಂದು ಕೇಂದ್ರ ಸಚಿವರಿಗೆ ವಿವರಿಸಲಾಗಿದೆ ಎಂದು ಸಂಸದ ಯದುವೀರ್ ವಿವರಿಸಿದರು. *ದಸರಾದ ಕ್ಯಾಪ್ಟನ್ ಅರ್ಜುನ ಆನೆ* ಮೈಸೂರು ದಸರಾ ಎಂದರೆ ಕಣ್ಮುಂದೆ ಬರುವುದೇ ಆನೆಗಳು. ಇವುಗಳ ಪೈಕಿ ಅತ್ಯಂತ ಗಮನ ಸೆಳೆದ ಆನೆಗಳೆಂದರೆ, ಜಯ ಮಾರ್ತಾಂಡ, ದ್ರೋಣ, ಬಲರಾಮ, ಅಭಿಮನ್ಯು. ಈ ಸಾಲಿನಲ್ಲಿ ವಿಶೇಷ ಸ್ಥಾನ ಹೊಂದಿರುವ “ಕ್ಯಾಪ್ಟನ್” ಎಂದರೆ “ಅರ್ಜುನ”. 2012 ರಿಂದ 2019ರವರೆಗೆ ಮುಂಚೂಣಿ ಆನೆಯಾಗಿ, ಚಿನ್ನದ ಅಂಬಾರಿಯನ್ನು ಹೊತ್ತು “ಕ್ಯಾಪ್ಟನ್” ರೂಪದಲ್ಲಿ ದಸರಾ ಜಂಬೂಸವಾರಿಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದಾನೆ ಈ ಅರ್ಜುನ ಆನೆ. 1959ರಲ್ಲಿ ಜನಿಸಿದ ಅರ್ಜುನ ಆನೆ ದುಬಾರಿ ಹಾಗೂ ಬಳ್ಳೆ ಅರಣ್ಯ ವಲಯದಲ್ಲಿ ತರಬೇತಿ ಪಡೆದಿದೆ. ಆಕರ್ಷಕ, ಅಜಾನುಬಾಹು ಮೈಕಟ್ಟು, ಶಾಂತ ಸ್ವಭಾವ, ಶಿಸ್ತು, ಗಾಂಭೀರ್ಯತೆಗೆ ಹೆಸರಾಗಿದ್ದ ಅರ್ಜುನ ಮೈಸೂರು ದಸರಾ ಸಂಭ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಕಾಡಾನೆ ಹಿಡಿಯುವ ಕಾರ್ಯಾಚರಣೆ ನಡೆಸುವ ವೇಳೆ ಕಾಡಾನೆ ದಾಳಿಗೆ ತುತ್ತಾದ ಅರ್ಜುನ 4 ಡಿಸೆಂಬರ್, 2023ರಂದು ಕೊನೆಯುಸಿರೆಳೆಯಿತು. ಇಡೀ ಕರ್ನಾಟಕವೇ ಅರ್ಜುನ ಆನೆಯ ಸಾವಿಗೆ ಕಣ್ಣೀರು ಸುರಿಸಿತ್ತು. ಈಗ ಅರ್ಜುನ ಆನೆಯ ಸ್ಮರಣಾರ್ಥ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ ಹೆಚ್ಚಿದೆ.