ವಿರಾಜಪೇಟೆ ಜ.15 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ವಿರಾಜಪೇಟೆ ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಪರಿಸರ ಸಂರಕ್ಷಣೆ ಮಾಹಿತಿ ಕಾರ್ಯಕ್ರಮ ನಡೆಯಿತು. ಮೂರ್ನಾಡು ವಲಯದ ಪಾರಣೆ ಕಾರ್ಯಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ನಂದಿನಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪರಿಸರ ನಾಶದಿಂದ ಪ್ರಾಣಿಗಳು ನಾಶವಾಗುತ್ತಿದೆ. ಮಣ್ಣಿನ ಸವಕಳಿ ಸಮಸ್ಯೆಯಾಗಿ ಮಳೆಯ ಸಂದರ್ಭದಲ್ಲಿ ಗುಡ್ಡ ಕುಸಿತ ಮುಂತಾದ ಪ್ರವಾಹಗಳಿಗೆ ಇದು ಎಡೆ ಮಾಡಿಕೊಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕಾಡು ಬೆಳೆಸಿ, ನಾಡು ಉಳಿಸುವಂತಾಗಬೇಕು ಎಂದು ಕರೆ ನೀಡಿದರು. ಪಾರಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ವೇದ ಪ್ರಸಾದ್ ಪರಿಸರವನ್ನು ಹೇಗೆ ಉಳಿಸಬೇಕು, ಗಿಡಗಳನ್ನು ಬೆಳೆಸುವುದರಿಂದ ನಮ್ಮ ಪರಿಸರವನ್ನು ಹೇಗೆ ಸಮೃದ್ಧಿಗೊಳಿಸಬಹುದು ಎಂಬ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಕಿಶೋರ್, ಪದಾಧಿಕಾರಿಗಳಾದ ವನಿತಾ, ಅನಿತಾ, ಕೃಷಿ ಮೇಲ್ವಿಚಾರಕರಾದ ವಸಂತ್, ಸೇವಾ ಪ್ರತಿನಿಧಿಗಳಾದ ಸಾವಿತ್ರಿ ಮತ್ತು ದಿವ್ಯ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.