ಮಡಿಕೇರಿ ಜ.16 NEWS DESK : ಇತ್ತೀಚೆಗೆ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿ ಅಮಾನುಷವಾಗಿ ನಡೆದುಕೊಂಡ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಉಮೇಶ್ ಕುಮಾರ್ ಪಿ. ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ತಪ್ಪು ಮಾಡಿದವರು ಯಾರೇ ಆಗಿರಲಿ, ಯಾವುದೇ ಪಕ್ಷ, ಜನಾಂಗಕ್ಕೆ ಸೇರಿದವರಾಗಿರಲಿ ಅವರಿಗೆ ತಕ್ಕ ಶಿಕ್ಷೆ ನೀಡುವ ಮೂಲಕ ಇನ್ನು ಮುಂದೆ ಈ ರೀತಿಯ ಪ್ರಕರಣಗಳು ನಡೆಯದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಹಸುಗಳು ರೈತಾಪಿ ವರ್ಗ ಹಾಗೂ ಗ್ರಾಮೀಣರ ಜೀವನಾಡಿಯಾಗಿವೆ. ಅಮಾನವೀಯವಾಗಿ ಕೆಚ್ಚಲುಗಳನ್ನು ಕತ್ತರಿಸಿರುವುದು ಕೃಷಿಕ ವರ್ಗಕ್ಕೆ ಅತೀವ ನೋವನ್ನುಂಟು ಮಾಡಿದೆ. ಒಕ್ಕಲಿಗರ ಮೂಲ ಕಸುಬೇ ಒಕ್ಕಲುತನ, ಒಕ್ಕಲುತನದ ಭಾಗವಾಗಿರುವ ಹಸುಗಳ ಮೇಲಿನ ದಾಳಿ ಖಂಡನೀಯ. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಮತ್ತು ಗೋವುಗಳ ಸಂರಕ್ಷಣೆಗೆ ಕಾನೂನಿನ ನಿಯಮಗಳನ್ನು ಬಿಗಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.